ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಸಾವು!
ಕಠ್ಮಂಡು: ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಸುಬ್ರತಾ ಘೋಷ್(45) ಮೃತ ಪರ್ವತಾರೋಹಿ. ಗುರುವಾರ 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ನಂತರ ಹಿಂತಿರುಗುವಾಗ ಹಿಲರಿ ಸ್ಟೆಪ್ಸ್ ಬಳಿ ಮೃತಪಟ್ಟಿದ್ದಾರೆ.
ಸುಬ್ರತಾ ಘೋಷ್ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಖರವನ್ನು ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದೆ ಎಂದು ಪರ್ವತಾರೋಹಣ ಕಂಪನಿ ಸ್ನೋವಿ ಹರೈಸನ್ ಟ್ರೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬೋಧರಾಜ್ ಭಂಡಾರಿ ತಿಳಿಸಿದರು.
ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಚಂಪಲ್ ತಮಾಂಗ್ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್‌ರಿಂದ ಇಳಿಯಲು ಸಾಧ್ಯವಾಗಲಿಲ್ಲ. ತಮಾಂಗ್ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂಪ್‌ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.
ಹಿಲರಿ ಸ್ಟೆಪ್ಸ್‌ನಲ್ಲಿ ಆಮ್ಲಜನಕದ ಮಟ್ಟವು ತೀವ್ರ ಕಡಿಮೆ ಇರುವುದರಿಂದ ಈ ಪ್ರದೇಶವನ್ನು ಸಾವಿನ ವಲಯ ಎಂದೇ ಕರೆಯಲಾಗುತ್ತದೆ.
ಬುಧವಾರವಷ್ಟೇ ಫಿಲಿಪೈನ್ಸ್‌ನ ಪರ್ವತಾರೋಹಿ ಫಿಲಿಪ್ ಸ್ಯಾಂಟಿಯಾಗೊ ದಕ್ಷಿಣ ಶಿಖರವನ್ನು ಏರುವಾಗ ಸಾವನ್ನಪ್ಪಿದ್ದರು. ಸ್ಯಾಂಟಿಯಾಗೊ ನಾಲ್ಕನೇ ಹೈ ಕ್ಯಾಂಪ್ ತಲುಪಿದಾಗ ದಣಿದು, ಟೆಂಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಸುನೀಗಿದ್ದರು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹಿಮಾಲ್ ಗೌತಮ್ ತಿಳಸಿದರು.
ಸ್ಯಾಂಟಿಯಾಗೊ ಮತ್ತು ಸುಬ್ರತಾ ಘೋಷ್ ಇಬ್ಬರೂ ಸ್ನೋವಿ ಹರೈಸನ್ ಟ್ರೆಕ್ಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಪರ್ವತಾರೋಹಣದ ಸದಸ್ಯರಾಗಿದ್ದರು.
ಇತರೆ ಸುದ್ದಿಗಳು