ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ
ಜನವರಿ 10:ಅರಳಿ ಮರವು 24 ಗಂಟೆಗಳೂ ಆಮ್ಲಜನಕವನ್ನು ಸೂಸುವ ಮೂಲಕ ಇತರೆ ಎಲ್ಲಾ ಮರಗಳಿಗೆ ತಾಯಿ ಮರದಂತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ಜ್ಞಾನಚೇತನ ಚಾರಿಟೇಬಲ್ ಟ್ರಸ್ಟ್‌ನ ಆಡಳಿತಾಧಿಕಾರಿಗಳಾದ ಡಾ. ಪಿ.ಎಸ್. ಲಕ್ಕಿ ಅವರು ಅಭಿಪ್ರಾಯಪಟ್ಟರು.ನಗರದ ಬಿ.ವಿ.ಬಿ. ಕಾಲೇಜು ಎದುರಿನ ರುದ್ರಭೂಮಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕರಾದ ದಿವಂಗತ ಶ್ರೀ ಬಿ.ಎಂ. ಕಾಂತಿಮಣಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅರಳಿ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇತರೆ ಎಲ್ಲಾ ಮರಗಳು ಹಗಲು ವೇಳೆಯಲ್ಲಿ ಮಾತ್ರ ಆಮ್ಲಜನಕ ನೀಡುತ್ತವೆ. ಆದರೆ ಅರಳಿ ಮರವು 24 ಗಂಟೆಗಳೂ ಹಾಗೂ ವರ್ಷಪೂರ್ತಿ ಆಮ್ಲಜನಕವನ್ನು ಹೊರಬಿಡುವ ವಿಶಿಷ್ಟ ಗುಣ ಹೊಂದಿದೆ” ಎಂದು ಹೇಳಿದರು.ಇದೇ ವೇಳೆ ಅವರು, ಭಗವಾನ್ ಬುದ್ಧರಿಗೆ ಅರಳಿ ಮರದ (ಬೋಧಿವೃಕ್ಷ) ಕೆಳಗಡೆ ಕುಳಿತಿರುವಾಗ ಜ್ಞಾನೋದಯವಾದ ಕಾರಣ ಈ ಮರವನ್ನು ಬೋಧಿವೃಕ್ಷ ಎಂದು ಕರೆಯಲಾಗುತ್ತದೆ. ಅರಳಿ ಮರ ಅತ್ಯಂತ ಪವಿತ್ರವಾಗಿದ್ದು, ಎಲ್ಲ ಧರ್ಮಗಳಲ್ಲಿಯೂ ಗೌರವದಿಂದ ಪೂಜಿಸಲ್ಪಡುತ್ತದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಡೆಪ್ಯೂಟಿ ಆರ್.ಎಫ್.ಓ. ಶ್ರೀ ಹಾವಪ್ಪಾ ಶೆಂಬೆಳ್ಳಿ ಅವರು ಮಾತನಾಡಿ, “ಜಿಲ್ಲಾದ್ಯಂತ ಅರಳಿ ಹಾಗೂ ಬೇವಿ ಮರಗಳನ್ನು ಹೆಚ್ಚು ಸಂಖ್ಯೆಯಲ್ಲಿ ನೆಡುವ ಮೂಲಕ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀ ಚಂದ್ರೇಗೌಡ, ತುಕಾರಾಮ, ಪ್ರಕಾಶ ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು