ಪಾವಗಡದಲ್ಲಿ ಜಂಬೂ ಸವಾರಿಯಿಂದ ವಿಜಯದಶಮಿ ಮೆರಗು
ಪಾವಗಡ: ತಾಲ್ಲೂಕಿನಾದ್ಯಂತ ವಿಜಯದಶಮಿ ಹಬ್ಬ ಬುಧವಾರ ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಜರುಗಿತು.
ಅಯುಧಪೂಜೆ ಅಂಗವಾಗಿ ಪಟ್ಟಣದ ಶನೈಶ್ಚರ ದೇಗುಲದ ಮುಂದೆ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ನಾಗಲಮಡಿಕೆ ಸುಬ್ರಹ್ಮಣೇಶ್ವರ ದೇಗುಲ, ಸಂಕಾಪುರ ಸುವರ್ಚಲಾ ಅಂಜನೇಯ ದೇಗುಲ ಸೇರಿ ಹಲವು ದೇಗುಲಗಳಲ್ಲಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶನೈಶ್ಚರ ದೇಗುಲದಲ್ಲಿ ಸೀತಲಾದೇವಿಗೆ ವಿಭಿನ್ನ ಅಲಂಕಾರ ಮಾಡಲಾಗಿತ್ತು.
ಪಟ್ಟಣದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ತಹಶೀಲ್ದಾರ್ ವೈ.ರವಿ ವಾದ್ಯವೃಂದದೊಂದಿಗೆ ಭಾಗವಹಿಸಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.
ಇದೇ ವೇಳೆ ವೈ.ಎನ್.ಹೊಸಕೋಟೆಯ ರಾಜಮನೆತನದ ಸಾಂಪ್ರದಾಯಿಕ ಜಂಬೂ ಸವಾರಿ ಸಂಭ್ರಮದಿಂದ ಜರುಗಿತು. ರಾಜಾ ಜಯಚಂದ್ರರಾಜು ಅವರು ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಸಾಗಿದ ಮೆರವಣಿಗೆ ಬನ್ನಿ ಮಂಟಪದಲ್ಲಿ ಮುಕ್ತಾಯಗೊಂಡು, ಶಮಿ ಪತ್ರೆ ಹಂಚಿಕೆ ಹಾಗೂ ಶುಭಾಶಯ ವಿನಿಮಯ ನಡೆಯಿತು.
ಇದೇ ರೀತಿ ಬೆಸ್ಕಾಂ ಕಚೇರಿಯ ವರಸಿದ್ಧಿ ವಿನಾಯಕ ದೇವಾಲಯದಲ್ಲೂ ವಿಶೇಷ ಪೂಜೆ ನಡೆದು, ಬನ್ನಿ ಮಂಟಪಕ್ಕೆ ಆಗಮಿಸಿದ ಭಕ್ತರು ವಿನಾಯಕನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಧಾರ್ಮಿಕ ಆಚರಣೆಗಳು, ಸಾಂಪ್ರದಾಯಿಕ ಮೆರವಣಿಗೆಗಳು ಹಾಗೂ ಭಕ್ತರ ಉತ್ಸಾಹದಿಂದ ತಾಲ್ಲೂಕಿನಾದ್ಯಂತ ವಿಜಯದಶಮಿ ಹಬ್ಬ ವೈಭವದಿಂದ ನೆರವೇರಿತು.
ಇತರೆ ಸುದ್ದಿಗಳು