ದಿಂಬಂ ಘಾಟ್‌ನಲ್ಲಿ ಆಹಾರ ಹುಡುಕಿದ ಕಾಡಾನೆ
ಚಾಮರಾಜನಗರ– ಕರ್ನಾಟಕ–ತಮಿಳುನಾಡು ಗಡಿಯ ದಿಂಬಂ ಘಾಟ್ ಪ್ರದೇಶದಲ್ಲಿ ಕಾಡಾನೆಗಳು ಮತ್ತೆ ರಸ್ತೆಬದಿಯಲ್ಲಿ ಕಾಣಿಸಿಕೊಂಡಿದ್ದು, ಹಾದು ಹೋಗುವ ವಾಹನ ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತಿನಿತ್ಯ ನೂರಾರು ಗೂಡ್ಸ್ ವಾಹನಗಳಲ್ಲಿ ತರಕಾರಿ, ಹಣ್ಣು, ದಿನಸಿ ಸಾಮಾನು ಹಾಗೂ ಕಬ್ಬು ಸಾಗಾಣಿಕೆ ನಡೆಯುತ್ತದೆ. ಇದನ್ನೇ ಆಹಾರಕ್ಕಾಗಿ ಬಳಸಿಕೊಳ್ಳುವ ಕಾಡಾನೆಗಳು ಸೂರ್ಯ ಅಸ್ತಮಿಸುವ ವೇಳೆಗೆ ರಸ್ತೆ ಬದಿಗೆ ಬರುತ್ತಿದ್ದು, ಹಾದು ಹೋಗುವ ವಾಹನಗಳನ್ನು ತಮ್ಮ ಸೊಂಡಿಲಿನಿಂದ ‘ಪರಿಶೀಲನೆ’ ಮಾಡುವಂತಹ ದೃಶ್ಯಗಳು ಸಾಮಾನ್ಯವಾಗಿವೆ.
ಕಬ್ಬು ಹಾಗೂ ತರಕಾರಿ ಸಾಗಣೆ ಮಾಡುವ ವಾಹನಗಳು ಬಂದರೆ ಕಾಡಾನೆಗೆ ಹಬ್ಬದಂತೆಯೇ. ಗಜರಾಜ ತನ್ನ ಸೊಂಡಿಲಿನಿಂದ ವಾಹನಗಳಿಂದ ಕಬ್ಬು, ತರಕಾರಿಗಳನ್ನು ಎಳೆದುಕೊಂಡು ತಿಂದು ಮತ್ತೆ ಕಾಡಿನಲ್ಲಿ ಅಡಗುತ್ತದೆ. ಈ ನಡುವೆ ಚಾಲಕರು ದೊಡ್ಡ ಭೀತಿಯಲ್ಲಿ ವಾಹನ ಚಲಾಯಿಸುವ ಪರಿಸ್ಥಿತಿ ಉಂಟಾಗಿದೆ. ದಿಂಬಂ ಘಾಟ್‌ನಲ್ಲಿ ಕಾಡಾನೆಗಳ ಈ ಕ್ರಮ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕರ ಬೇಡಿಕೆ ಜೋರಾಗಿದೆ.
ಇತರೆ ಸುದ್ದಿಗಳು