ವರದಿಗಾರರು :
ಸುರೇಶ ||
ಸ್ಥಳ :
ತುಮಕೂರು
ವರದಿ ದಿನಾಂಕ :
21-11-2025
ರಾಗಿ ಕಟಾವು ಯಂತ್ರ ಬಾಡಿಗೆಗೆ ಕೊರಟಗೆರೆಯಲ್ಲಿ ರೂ. 2,700 ನಿಗದಿ
ಕೊರಟಗೆರೆ: ತಾಲ್ಲೂಕಿನಲ್ಲಿ ರಾಗಿ ಕಟಾವು ಯಂತ್ರಗಳ ಬಾಡಿಗೆ ದರವನ್ನು ಪ್ರತಿ ಗಂಟೆಗೆ ರೂ. 2,700 ಎಂದು ನಿಗದಿಪಡಿಸಲಾಗಿದ್ದು, ಇದಕ್ಕಿಂತ ಹೆಚ್ಚಾಗಿ ಹಣ ಬೇಡಿಕೆ ಮಾಡುವವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ–2005ರಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಮಂಜುನಾಥ ಕೆ. ಸ್ಪಷ್ಟಪಡಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ಕಟಾವು ಯಂತ್ರ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. 2025–26ರ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 12,180 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿದ್ದು, ಕಳೆದ ವರ್ಷದ ಹೊಲಿಕೆಗೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಿಂದ 3000 ಹೆಕ್ಟೇರ್ ಹೆಚ್ಚು ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. ಇದೀಗ ರಾಗಿ ಕಟಾವು ಹಂತ ತಲುಪಿರುವುದರಿಂದ ಬಳ್ಳಾರಿ ಜಿಲ್ಲೆಯಿಂದ 15–20 ಕಟಾವು ಯಂತ್ರಗಳು ತಾಲ್ಲೂಕಿಗೆ ಆಗಮಿಸಿರುವುದಾಗಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನವೆಂಬರ್ 11ರಂದು ನಡೆದ ಸಭೆಯಲ್ಲಿ ಕಟಾವು ಯಂತ್ರಗಳ ಬಾಡಿಗೆ ದರ ಅಂತಿಮಗೊಳಿಸಲಾಗಿರುವುದಾಗಿ ಅವರು ತಿಳಿಸಿದರು. ನಿಗದಿಪಡಿಸಿದ ದರವನ್ನು ಮಾತ್ರ ರೈತರಿಂದ ವಸೂಲಿಸಬೇಕು ಎಂದು ಯಂತ್ರ ಮಾಲೀಕರು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಎಂ. ಆರ್. ರುದ್ರಪ್ಪ ಮಾತನಾಡಿ, ಟ್ರ್ಯಾಕ್ಟರ್ ಚಾಲಿತ ಕಟಾವು ಯಂತ್ರಗಳಿಗೆ ರೂ. 2,400 ಬಾಡಿಗೆ ಹಾಗೂ ರಾಗಿ ಕಂತೆ ಮಾಡಲು ಬಳಸುವ ಬೇಲರ್‌ಗಳಿಗೆ ಪ್ರತಿ ಕಂತೆಗೆ ರೂ. 25 ನಿಗದಿ ಮಾಡಲಾಗಿದೆ ಎಂದು ತಿಳಿಸಿದರು. ನಿಗದಿತ ದರಕ್ಕಿಂತ ಹೆಚ್ಚಾಗಿ ಹಣ ವಸೂಲಿ ಮಾಡಿದರೆ, ಹತ್ತಿರದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ ಅಥವಾ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ರೈತರಿಗೆ ಕರೆ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ನರಸಿಂಹಮೂರ್ತಿ, ನಾಗರಾಜು, ವೆಂಕಟೇಶ್, ರೈತ ಮುಖಂಡರು ಹಾಗೂ ಕಟಾವು ಯಂತ್ರ ಮಾಲೀಕರು ಹಾಜರಿದ್ದರು.
