ವರದಿಗಾರರು :
ಬಸವರಾಜ್ ||
ಸ್ಥಳ :
ಕೂಡ್ಲಿಗಿ
ವರದಿ ದಿನಾಂಕ :
28-11-2025
ಬಾಲ್ಯವಿವಾಹ ತಡೆಗೆ ಶಿಕ್ಷಣ, ಸ್ಥಳಾಂತರ ತಡೆಗೆ ಕೆರೆ ಅಭಿವೃದ್ಧಿ ಅಗತ್ಯ: ಶಾಸಕ ಡಾ. ಶ್ರೀನಿವಾಸ್
ತಾಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ “ಮನೆ ಮನೆಗೆ ನಮ್ಮ ಶಾಸಕರು – ಮನೆ ಬಾಗಿಲಿಗೆ ನಮ್ಮ ಸರ್ಕಾರ” ಎಂಬ ವಿಶೇಷ ಜನಸ್ಪಂದನ ಕಾರ್ಯಕ್ರಮವನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರು ಮಾತನಾಡಿ, “ಈ ಭಾಗವು ಅತೀ ಕಡಿಮೆ ಮಳೆಯಾಗುವ ಪ್ರದೇಶ. ಕುಡಿಯುವ ನೀರು ಫ್ಲೋರೈಡ್ ಯುಕ್ತವಾಗಿರುವುದರಿಂದ ಜನರ ಆರೋಗ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೂ ಅಡ್ಡಿಯಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು
ಸಾಮಾಜಿಕ ಪಿಡುಗುಗಳ ವಿರುದ್ಧ ಕಾಳಜಿ ಕ್ಷೇತ್ರದಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿರುವುದನ್ನು ಶಾಸಕರು ವಿಷಾದ ವ್ಯಕ್ತಪಡಿಸಿದರು. “ಹತ್ತಿರದ ಸಂಬಂಧಿಗಳಲ್ಲಿ ಮದುವೆಯಾಗುತ್ತಿರುವುದರಿಂದ ಸುಮಾರು 117 ಮಕ್ಕಳು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯಲ್ಲಿ 691 ವಿಧವೆಯರು ಇದ್ದಾರೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ-ಸಮಾಜ ಈಗಲೇ ಕೈ ಜೋಡಿಸಬೇಕಾಗಿದೆ,” ಎಂದು ಅವರು ತಿಳಿಸಿದರು.
ಕೆರೆ ಅಭಿವೃದ್ಧಿ – ಉದ್ಯೋಗ ಸಂರಕ್ಷಣೆ ಉದ್ಯೋಗಕ್ಕಾಗಿ ಜನರು ಗುಳೇ ಹೋಗುವುದನ್ನು ಕಡಿಮೆ ಮಾಡಲು ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಶಾಸಕರು ಮುಂದಾಗಿ ಹೇಳಿದರು: “216 ಎಕರೆ ವಿಸ್ತೀರ್ಣದ ತಿಪ್ಪೇಹಳ್ಳಿ ಕೆರೆಯನ್ನು ತೆರವುಗೊಳಿಸಿ ಸರ್ಕಾರಕ್ಕೆ ಸೇರ್ಪಡೆ ಮಾಡಲಾಗಿದೆ. ಕೆರೆಯ ಸಮಗ್ರ ಅಭಿವೃದ್ಧಿಗೆ 2 ಕೋಟಿಗೂ ಅಧಿಕ ಅನುದಾನ ಮಂಜೂರಾಗಿದೆ.”
ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಮೂಲ ಬಾಲ್ಯವಿವಾಹ ತಡೆಗಟ್ಟಲು ಶಿಕ್ಷಣವೇ ಮುಖ್ಯ ಆಯುಧವೆಂದು ಸೂಚಿಸಿದ ಅವರು, ಪೂಜಾರಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (KPS) ನಿರ್ಮಾಣಕ್ಕೆ ಶೀಘ್ರದಲ್ಲೇ ಭೂಮಿ ಪೂಜೆ ನಡೆಯಲಿದೆ ಎಂದು ಭರವಸೆ ನೀಡಿದರು. ಕಾತ್ರಿಕೆಹಟ್ಟಿ–ಚಿನ್ನಹಗರಿ ಹಳ್ಳಗಳ ಜನರು ಸುಮಾರು 40 ವರ್ಷಗಳಿಂದ ಬೇಡುತ್ತಿದ್ದ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅವಕಾಶ ಕಲ್ಪಿಸಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ ಎಂದೂ ಹೇಳಿದರು.
ಶಾಸಕರಿಂದ ಶ್ರಮದಾನ – ಸಾರ್ವಜನಿಕರಿಂದ ಅಹವಾಲುಗಳ ಸಲ್ಲಿಕೆ ಕಾರ್ಯಕ್ರಮಕ್ಕೂ ಮೊದಲು ಶಾಸಕರು ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡು “ಶಾಸಕನೇ ಸೇವಕ” ಎಂಬ ಸಂದೇಶ ನೀಡಿದರು. ಸರ್ಕಾರವೇ ಜನರ ಮನೆಬಾಗಿಲಿಗೆ ಬಂದು ಸೇವೆ ನೀಡುತ್ತಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು. ಸಾವಿರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಶಾಸಕನವರಿಗೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯೂ ಮಾಡಲಾಗಿತ್ತು.
