ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
02-12-2025
ಇಂದಿರಾ ಆಹಾರ ಕಿಟ್ ಅನುಷ್ಠಾನಕ್ಕೆ ವೇಗ: ಸಿಎಂ ಸಿದ್ದರಾಮಯ್ಯ
ಇಂದಿರಾ ಆಹಾರ ಕಿಟ್ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್ ವಿತರಿಸಲು ಸಂಪುಟ ಈಗಾಗಲೇ ಅನುಮೋದನೆ ನೀಡಿರುವುದರಿಂದ, ಸಭೆಯಲ್ಲಿ ಅನೇಕ ಪ್ರಮುಖ ಮಾರ್ಗಸೂಚಿಗಳನ್ನು ಸಿಎಂ ನೀಡಿದರು.
ಯೋಜನೆಯಡಿ ಕುಟುಂಬದ ಸದಸ್ಯರ ಸಂಖ್ಯೆ ಅನ್ವಯ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಒಳಗೊಂಡ ಕಿಟ್‌ಗಳನ್ನು ನೀಡಲಾಗುತ್ತದೆ. ಪ್ರತಿ ತಿಂಗಳು 1,25,08,262 ಕಿಟ್‌ಗಳ ಅಗತ್ಯವಿದ್ದು, ಇದಕ್ಕಾಗಿ ₹466 ಕೋಟಿ ವೆಚ್ಚವಾಗುವದು ಎಂದು ಅಂದಾಜಿಸಲಾಗಿದೆ. ರಾಜ್ಯದ ಮಾಸಿಕ ಅಗತ್ಯಗಳಲ್ಲಿ 18,628 ಮೆಟ್ರಿಕ್ ಟನ್ ತೊಗರಿ ಬೇಳೆ ಮತ್ತು ತಲಾ 12,419 ಮೆಟ್ರಿಕ್ ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಸೇರಿವೆ.
ಕಿಟ್‌ಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ತೊಗರಿ ಬೇಳೆ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಸಿಎಂ ಸೂಚಿಸಿದರು. ಕೇಂದ್ರ ಸರಬರಾಜು ಸಂಸ್ಥೆಗಳಾದ ನಾಫೆಡ್ ಹಾಗೂ ಎನ್ಸಿಸಿಎಫ್ ಮುಖಾಂತರ ಅಥವಾ ಕೆಟಿಪಿಪಿ ನಿಯಮಾವಳಿಗಳಂತೆ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ನಿರ್ದೇಶನ ನೀಡಿದರು. ವಿತರಿಸಲಾಗುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದೆಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಬಳಕೆದಾರರಿಗೆ ಕಿಟ್‌ಗಳ ವಿತರಣೆ ಪಾರದರ್ಶಕವಾಗಿರಲು ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿಯೂ QR ಕೋಡ್ ಸ್ಕ್ಯಾನಿಂಗ್ ವ್ಯವಸ್ಥೆ ಅಳವಡಿಸಲು ಆದೇಶ ನೀಡಲಾಯಿತು. ನಿಗಮದ ಗೋದಾಮು ಹಾಗೂ ಸಗಟು ಮಳಿಗೆಗಳಿಂದ ಕಿಟ್‌ಗಳನ್ನು ಪ್ರತಿಮಾಸದ 10ನೇ ತಾರೀಖಿನೊಳಗೆ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವಂತೆ ಸಿಎಂ ಸೂಚಿಸಿದರು.
ಪೌಷ್ಟಿಕತೆ, ಗುಣಮಟ್ಟ ಮತ್ತು ಪಾರದರ್ಶಕತೆಯನ್ನೇ ಕೇಂದ್ರಬಿಂದುವಾಗಿಸಿಕೊಂಡು ಇಂದಿರಾ ಆಹಾರ ಕಿಟ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ.
