ವರದಿಗಾರರು :
ಗಜೇಂದ್ರ ಡಿ.ಪಿ ||
ಸ್ಥಳ :
ದೇವನಹಳ್ಳಿ
ವರದಿ ದಿನಾಂಕ :
28-11-2025
ಮಾದಕ ವ್ಯಸನ ಮುಕ್ತ ಸಮಾಜ ನಮ್ಮೆಲ್ಲರ ಗುರಿ: ಡಿಸಿ ಎ.ಬಿ. ಬಸವರಾಜು
ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬೊಮ್ಮವಾರ ಗ್ರಾಮದ ಗಾಂಧೀ ಭವನದಲ್ಲಿ ಮಾದಕ ವಸ್ತು ನಿಯಂತ್ರಣ ಕುರಿತು ಜಾಗೃತಿ ಮತ್ತು ಮಾಸ್ಟರ್ ತರಬೇತಿದಾರರ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು, “ಮಾದಕ ವ್ಯಸನವು ಸಮಾಜಕ್ಕೆ ಗಂಭೀರ ಪಿಡುಗಾಗಿ ಪರಿಣಮಿಸಿದೆ. ಪೋಷಕರು ತಮ್ಮ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಬೇಕು, ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು,” ಎಂದು ಹೇಳಿದರು. ಯುವ ಸಮೂಹದಲ್ಲಿ ವ್ಯಸನದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಶಾಲಾ–ಕಾಲೇಜು ಮಟ್ಟದಿಂದಲೇ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು. “ಇದರಿಗಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನೀವು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ವ್ಯಸನರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು,” ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಕೆ. ಬಾಬಾ ಅವರು ಮಾತನಾಡಿ, “ತರಬೇತಿಗೆ ಆಯ್ಕೆಗೊಂಡ ಶಿಕ್ಷಕರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಅಪಾಯಗಳ ಬಗ್ಗೆ ತಿಳಿಸಬೇಕು. ಯುವ ಸಮೂಹವನ್ನು ವ್ಯಸನದಿಂದ ದೂರ ಇಡುವುದು ನಮ್ಮ ಜವಾಬ್ದಾರಿ. ಮಾದಕ ವಸ್ತುಗಳ ನಿರ್ಮೂಲನೆ ಒಂದು ಯುದ್ಧದಂತೆ; ಪ್ರತಿಯೊಬ್ಬ ವಿದ್ಯಾರ್ಥಿಗೂ ಜಾಗೃತಿ ತಲುಪಬೇಕು,” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಅಬಕಾರಿ, ಆರೋಗ್ಯ, ಪೊಲೀಸ್ ಹಾಗೂ ಎನ್ಸಿಬಿ ಇಲಾಖೆಗಳ ಉಪನ್ಯಾಸಕರು ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಟ ಹಾಗೂ ಕಾನೂನು ಕ್ರಮಗಳ ಕುರಿತು ತರಬೇತಿ ನೀಡಿದರು. ತರಬೇತಿಗೊಳಗಾದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅಬಕಾರಿ ಅಧಿಕಾರಿ ರವೀಂದ್ರ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ಸೈಯದ್ ತಬ್ಸಿವುಲ್ಲಾ, ಡಿವೈಎಸ್ಪಿ ಪಾಂಡುರಂಗ, ಮಹಿಳಾ ಪೊಲೀಸ್ ಠಾಣೆಯ ಎಸ್ಐ ನವೀನ್ ಕುಮಾರ್, ಎನ್ಸಿಬಿ ಸೂಪರಿಂಟೆಂಡೆಂಟ್ ರತನ್, ಮನುಚಿಕಿತ್ಸಕರಾದ ಡಾ. ಗರೀಶ್ ಕುಮಾರ್, ಡಾ. ಪ್ರಮೋದ್, ಇಶಾ ವಾಲಂಟಿಯರ್ ಮನು, ಶಿಕ್ಷಕರು ಹಾಗೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
