ವರದಿಗಾರರು :
ದರ್ಶನ್ ಎಂ. ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
24-11-2025
ದಾವಣಗೆರೆ: ಜೆಡಿಎಸ್ ಮುಖಂಡರ ಹತ್ಯಾ ಯತ್ನ ಪ್ರಕರಣ—ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ್ ಬಂಧನ
ದಾವಣಗೆರೆ: ಜೆಡಿಎಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಟಿ. ಅಸ್ಗರ್ ಅವರ ಮೇಲೆ ನಡೆದಿದ್ದ ಹತ್ಯಾ ಯತ್ನ ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಹಾಗೂ ನಟಿ ಸವಿತಾ ಮಲ್ಲೇಶ್ ನಾಯ್ಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ನಾಯಕಿಯಾದ ಸವಿತಾ ನಾಯ್ಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಯತ್ನದಲ್ಲಿ ಪ್ರಮುಖ ಆರೋಪಿ ಹಾಗೂ ರೌಡಿಶೀಟರ್ ಖಾಲಿದ್ ಪೈಲ್ವಾನ್‌ಗೆ ಆಶ್ರಯ ಮತ್ತು ಹಣಕಾಸಿನ ನೆರವು ನೀಡಿದ್ದುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ 10ರಂದು ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಜೆಡಿಎಸ್ ಮುಖಂಡ ಟಿ. ಅಸ್ಗರ್ ಮೇಲೆ ಕಾಂಗ್ರೆಸ್ ಮುಖಂಡ ಖಾಲಿದ್ ಪೈಲ್ವಾನ್ ಚಾಕುವಿನಿಂದ ದಾಳಿ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅಸ್ಗರ್ ಸಮಯಕ್ಕೆ ಚಿಕಿತ್ಸೆ ದೊರೆತ ಕಾರಣ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ದಾಳಿಕೋರನಾದ ಖಾಲಿದ್ ಪೈಲ್ವಾನ್ ಸಧ್ಯ ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಸವಿತಾ ಮಲ್ಲೇಶ್ ನಾಯ್ಕ್ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರೂ ನೀಡದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ ಪುನಃ ಕಾಂಗ್ರೆಸ್‌ಗೆ ಮರಳಿದ್ದ ಅವರು ಪಕ್ಷದ ವಿವಿಧ ಕಾರ್ಯಕ್ರಮಗಳು, ಸಭೆ, ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದರೆಂದು ಮೂಲಗಳು ತಿಳಿಸಿವೆ.
ಅವರ ವಿರುದ್ಧ ದಾಖಲಾದ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಕೊಂಡಿದ್ದು, ಅವರು ಇದೀಗ ಜೈಲಿನಲ್ಲಿದ್ದಾರೆ.
