ವರದಿಗಾರರು :
ಬಿ.ಎಂ. ಮಹೇಶ್ ಕುಮಾರ್, ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
01-12-2025
ಉದ್ದಿಮೆಗಳ ಕುರಿತು ಅರಿವು ಅಗತ್ಯ: ಸುಧಾಕರ್
ಬಳ್ಳಾರಿ: ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಟ್ರೇಡ್ಸ್ ಹಾಗೂ ರಿಸೀವಬಲ್ಸ್ ಕುರಿತು ಪೂರಕ ಅರಿವು ಹೊಂದಿರುವುದು ಅತ್ಯಾವಶ್ಯಕವಾಗಿದೆ ಎಂದು ಸುಧಾಕರ್ ಪೈಪ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ನಗರದಲ್ಲಿನ ಕೌಲ್ ಬಜಾರ್‌ನ ಮೊಹಮ್ಮದೀಯ ಕಾಲೇಜು ಬಳಿಯ ಗಾರ್ಮೆಂಟ್ ರಿಸರ್ಚ್ ಟ್ರೈನಿಂಗ್ ಡಿಸೈನ್ ಅಂಡ್ ಡೆವಲಪ್ಮೆಂಟ್ ಸೆಂಟರ್ (ಜಿಆರ್‌ಟಿಡಿಎಸ್) ಸಭಾಂಗಣದಲ್ಲಿ ಶುಕ್ರವಾರ ಟ್ರೇಡ್ಸ್ ಮತ್ತು ಪರಿಸರ ನಿರ್ವಹಣೆ (ESM) ಕುರಿತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಉದ್ಯಮ ನಡೆಸುವುದು ಮಾತ್ರ ಸಾಕಾಗುವುದಿಲ್ಲ; ಮಾರುಕಟ್ಟೆ, ಹಣಕಾಸು ಸಂಚಾರ ಮತ್ತು ಪರಿಸರ ಜವಾಬ್ದಾರಿಗಳ ಬಗ್ಗೆ ಸಮಗ್ರ ಜ್ಞಾನ ಉದ್ಯಮಿಗಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ,” ಎಂದು ಸೂಚಿಸಿದರು
ಫ್ಯಾಕ್ಟರೀಸ್ ಅಂಡ್ ಬಾಯಿಲರ್ಸ್ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ. ವರುಣ್, ಪರಿಸರ ನಿರ್ವಹಣೆಯ ಮಹತ್ವವನ್ನು ಹೈಲೈಟ್ ಮಾಡುತ್ತಾ, “ಉದ್ಯಮಿಗಳು ತಾವು ತಯಾರಿಸುವ ವಸ್ತುಗಳ ಪರಿಸರ ಪ್ರಭಾವದ ಬಗ್ಗೆ ಅರಿವು ಹೊಂದುವುದು ಕಾಲದ ಅವಶ್ಯಕತೆ,” ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಆರ್‌ಟಿಡಿಎಸ್ ಪ್ರಾಂಶುಪಾಲ ಬಿಂದು, ಯುವ ಉದ್ಯಮಿಗಳು ಫ್ಯಾಷನ್ ಉತ್ಪನ್ನಗಳು ಹಾಗೂ ಗಾರ್ಮೆಂಟ್ ಕ್ಷೇತ್ರದಲ್ಲಿ ಟ್ರೇಡ್ಸ್ ಮತ್ತು ESM ಯೋಜನೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಟ್ರೇಡ್ಸ್ ಮತ್ತು ESM ಸಂಬಂಧಿತ ವಿವಿಧ ಸೌಲಭ್ಯಗಳು, ಉದ್ಯಮಿಗಳ ಯಶೋಗಾಥೆಗಳು ಹಾಗೂ ಪ್ರಾಯೋಗಿಕ ಅನುಭವಗಳ ಬಗ್ಗೆ ವಿವರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸೋಮೇಶೇಖರ್, ಟ್ರೇಡ್ಸ್ ಸಂಪನ್ಮೂಲ ವ್ಯಕ್ತಿಗಳಾದ ಬಾಲಚಂದ್ರ, ಮಂಜುನಾಥ ಬೊಳ್ಳೊಳ್ಳಿ, ಜಿಆರ್‌ಟಿಡಿಎಸ್‌ನ ಪಂಪನಗೌಡ ಸೇರಿದಂತೆ ಅನೇಕ ಉದ್ಯಮಿಗಳು ಭಾಗವಹಿಸಿದ್ದರು.
