ಬೆಂಗಳೂರು ನಗರದಲ್ಲಿ ಅಚ್ಚರಿ: ಪಾಳು ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ
ನಗರದ ಕೊತ್ತನೂರು ಬಳಿಯಲ್ಲಿರುವ ಅಪಾರ್ಟ್‌ಮೆಂಟ್ ನಿರ್ಮಾಣ ಸ್ಥಳದಲ್ಲಿ ಅಸ್ತಿಪಂಜರ ಪತ್ತೆಯಾದ ಘಟನೆ ಆತಂಕ ಮೂಡಿಸಿದೆ.
ಮಾಹಿತಿಯಂತೆ, ಕಟ್ಟಡಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿದ್ದ ಕಾರಣ ಕಳೆದ 10 ವರ್ಷಗಳಿಂದ ಯಾವುದೇ ನಿರ್ಮಾಣ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಕಟ್ಟಡ ಪಾಳು ಬಿದ್ದಿತ್ತು. ಈ ಅವಧಿಯಲ್ಲಿ ಕಟ್ಟಡದಲ್ಲಿ ಹಲವು ಅಕ್ರಮ ಚಟುವಟಿಕೆಗಳು ನಡೆದಿದ್ದವು ಎಂಬ ಶಂಕೆ ವ್ಯಕ್ತವಾಗಿದೆ.
ನೆನ್ನೆ (ಅ.3) ಶುಕ್ರವಾರ, ಕಟ್ಟಡ ಮಾಲೀಕರು ಪುನಃ ಕೆಲಸ ಪ್ರಾರಂಭಿಸುವ ಸಲುವಾಗಿ ಸ್ಥಳವನ್ನು ಸ್ವಚ್ಛಗೊಳಿಸುತ್ತಿದ್ದಾಗ ಕಾರ್ಮಿಕರಿಗೆ ಅಸ್ತಿಪಂಜರ ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದು, ಸೋಕೋ ತಂಡವು ಸಹ ತನಿಖೆಗೆ ತೊಡಗಿದೆ.
ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಅಸ್ತಿಪಂಜರ 7-8 ತಿಂಗಳ ಹಿಂದಿನ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ. ಸಾವಿನ ನಿಜವಾದ ಕಾರಣ ಹಾಗೂ ಅಸ್ತಿಪಂಜರ ಯಾರದ್ದು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.
ಸ್ಥಳೀಯರು ಈ ಘಟನೆಯ ಹಿನ್ನೆಲೆಯಲ್ಲಿ ಭೀತಿಗೊಳಗಾಗಿದ್ದು, ಕಟ್ಟಡದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯ ವ್ಯಕ್ತಪಡಿಸಿದ್ದಾರೆ.
ಇತರೆ ಸುದ್ದಿಗಳು