ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದ 2ನೇ ಸ್ಥಾನ
ತುಮಕೂರು ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಾದ್ಯಂತ ನಡೆಯುತ್ತಿರುವ ಸಮೀಕ್ಷೆಯಲ್ಲಿ ತುಮಕೂರು ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು. ಜಿಲ್ಲೆಯ 6,544 ಬ್ಲಾಕ್‌ಗಳ ಒಳಗೊಂಡ 7,55,483 ಮನೆಗಳ ಸಮೀಕ್ಷೆ ಅಕ್ಟೋಬರ್ 7ರೊಳಗೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ 1,59,555 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು 6,537 ಗಣತಿದಾರರು ನೇಮಕಗೊಂಡಿದ್ದಾರೆ. ಒಂದು ದಿನದಲ್ಲಿ 73,910 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಾಧನೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತುಮಕೂರು ಎರಡನೇ ಸ್ಥಾನದಲ್ಲಿದೆ ಎಂದು ಸಚಿವರು ವಿವರಿಸಿದರು.
ತುಮಕೂರು ಮೆಟ್ರೊ ರೈಲು ಯೋಜನೆ ಇನ್ನಷ್ಟು ಹತ್ತಿರವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಮಾದಾವಾರ–ತುಮಕೂರು ಮಾರ್ಗದ (59.6 ಕಿ.ಮೀ.) ಮೆಟ್ರೊ ರೈಲು ವಿಸ್ತರಣೆ ಕುರಿತು ಬಿಎಂಆರ್ಸಿಎಲ್ ಅಧ್ಯಯನ ಪೂರ್ಣಗೊಳಿಸಿದ್ದು, ₹20,649 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಖಾಸಗಿ–ಸಾರ್ವಜನಿಕ ಸಹಭಾಗಿತ್ವ (PPP) ಮಾದರಿಯಲ್ಲಿ ಯೋಜನೆ ಜಾರಿಗೆ ತರಲು ಸೆಪ್ಟೆಂಬರ್ 25ರಂದು ಸರ್ಕಾರ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ ಸಿದ್ಧವಾಗಲಿದೆ. ಖಾಸಗಿ ಕಂಪನಿಗಳು ಈಗಾಗಲೇ ಆಸಕ್ತಿ ತೋರಿದ್ದು, ತುಮಕೂರು ಜನರ ಬಹುನಿರೀಕ್ಷಿತ ಮೆಟ್ರೊ ಕನಸು ನನಸಾಗುವ ಸಾಧ್ಯತೆ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇತರೆ ಸುದ್ದಿಗಳು