ವರದಿಗಾರರು :
ಕೆ ಜೆ ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
01-12-2025
ಎಂಎಲ್ಸಿ ಡಿ.ಟಿ. ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಿ: ಹಾಸನ ಜಿಲ್ಲಾ ಯಾದವ ಸಂಘದ ಆಗ್ರಹ
ರಾಜ್ಯ ಗೊಲ್ಲ (ಯಾದವ) ಸಮುದಾಯಕ್ಕೆ ರಾಜಕೀಯ ಪ್ರತಿನಿಧಿತ್ವ ಹೆಚ್ಚಿಸಬೇಕೆಂದು ಒತ್ತಾಯಿಸಿ, ಹಾಸನ ಜಿಲ್ಲಾ ಗೊಲ್ಲ (ಯಾದವ) ಸಂಘವು ರಾಜ್ಯಾಧ್ಯಕ್ಷ ಹಾಗೂ ಎಂಎಲ್ಸಿ ಡಿ.ಟಿ. ಶ್ರೀನಿವಾಸ್ ಅವರಿಗೆ ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಸರ್ಕಾರವನ್ನು ಮನವಿ ಮಾಡಿದೆ. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೊನ್ನೇಗೌಡ ಮಾತನಾಡಿ, ರಾಜ್ಯದಲ್ಲಿ ಯಾದವ ಸಮುದಾಯದ ಜನಸಂಖ್ಯೆ 19 ಲಕ್ಷಕ್ಕೂ ಅಧಿಕವಾಗಿದ್ದರೂ ರಾಜಕೀಯವಾಗಿ ಸಮರ್ಪಕ ಪ್ರತಿನಿಧಿತ್ವ ದೊರಕಿಲ್ಲ ಎಂದು ವಿಷಾದಿಸಿದರು.
ಯಾದವ ಸಮುದಾಯದ ದೀಕ್ಷಿತ ನಾಯಕ ದಿ.ಎ. ಕೃಷ್ಣಪ್ಪ ಅವರ ನಂತರ ರಾಜ್ಯ ಸಂಘಟನೆಯ ನೇತೃತ್ವವನ್ನು ಡಿ.ಟಿ. ಶ್ರೀನಿವಾಸ್ ಬಲಿಷ್ಠವಾಗಿ ಮುಂದುವರಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ತುಮಕೂರು, ಚಿತ್ರದುರ್ಗ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಜ್ಯ ಗೊಲ್ಲ ಸಮಾವೇಶಗಳು ಯಶಸ್ವಿಯಾಗಿ ನಡೆಯಿವೆ,” ಎಂದು ಅವರು ಹೇಳಿದರು. 2024ರ ಆಗ್ನೇಯ ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟವರು ಡಿ.ಟಿ. ಶ್ರೀನಿವಾಸ್ ಎಂಬುದನ್ನು ಅವರು ನೆನಪಿಸಿದರು. “ತಮ್ಮ ಚಾಣಾಕ್ಷ ತಂತ್ರಗಳು, ವಿಶಾಲ ಸಂಘಟನೆ ಮತ್ತು ಚುನಾವಣಾ ಅನುಭವವು ಅವರನ್ನು ಸಚಿವಸ್ಥಾನಕ್ಕೆ ಅರ್ಹರನ್ನಾಗಿ ಮಾಡುತ್ತದೆ,” ಎಂದು ಹೊನ್ನೇಗೌಡ ಅಭಿಪ್ರಾಯ ಪಟ್ಟರು.
ಡಾಕ್ಟರೇಟ್ ಸೇರಿದಂತೆ ಅನೇಕ ಪದವಿಗಳನ್ನು ಪಡೆದಿರುವ ಶ್ರೀನಿವಾಸರು ರಾಜ್ಯದ ಹಿಂದುಳಿದ ಪ್ರವರ್ಗ–1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ 95ಕ್ಕೂ ಹೆಚ್ಚು ಅತಿಹಿಂದುಳಿದ ಸಮಾಜಗಳನ್ನು ಸಂಘಟಿಸಲು ಶ್ರಮಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಸರ್ಕಾರ ಮಾನ್ಯತೆಯನ್ನು ನೀಡಿ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು. “ಗೊಲ್ಲ ಸಮುದಾಯವನ್ನು ಹಲವು ವರ್ಷಗಳಿಂದ ರಾಜಕೀಯವಾಗಿ ಕಡೆಗಣಿಸಲಾಗಿದೆ. ಆದರೆ ಈ ಬಾರಿ ಸರ್ಕಾರವು ನ್ಯಾಯ ಮಾಡಬೇಕೆಂಬ ಆಶೆಯಿದೆ,” ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ನೇತೃತ್ವದ ಕೃಷ್ಣಪ್ಪ, ಗೋವಿಂದರಾಜು, ಕೇಶವೇಗೌಡ, ನರಸಿಂಹಮೂರ್ತಿ ಹಾಗೂ ಇತರರು ಹಾಜರಿದ್ದರು.
