ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
18-11-2025
“ಆಣದೂರಿಗೆ ಹೊಸ ಅಧ್ಯಾಯ: ಬೌದ್ಧ ಸಾಂಸ್ಕೃತಿಕ ಭವನಕ್ಕೆ ₹10 ಕೋಟಿ ಅನುದಾನ ಘೋಷಣೆ”
ಬೀದರ್, ಆಣದೂರು: ತಾಳ್ಲೂಕಿನ ಆಣದೂರಿನಲ್ಲಿ ನಿರ್ಮಾಣಗೊಳ್ಳಲಿರುವ ಬೌದ್ಧ ಸಾಂಸ್ಕೃತಿಕ ಭವನಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹10 ಕೋಟಿ ಅನುದಾನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಭಾನುವಾರ ಬೌದ್ಧ ವಿಹಾರದಲ್ಲಿ ನಡೆದ ಬೌದ್ಧ ಸಮ್ಮೇಳನ ಮತ್ತು ಆನಂದ ಬೋಧಿ ಬೌದ್ಧ ಮಹಾ ಸ್ತೂಪದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವರು ಮುಂದುವರಿದು, “ಎಲ್ಲರೊಂದಿಗೆ ಚರ್ಚಿಸಿ, ಕಲಬುರಗಿ ಅಥವಾ ಉದಗಿರ ಮಾದರಿಯಂತೆ ಸಮಗ್ರ ಸೌಲಭ್ಯಗಳೊಂದಿಗೆ ಭವನವನ್ನು ನಿರ್ಮಾಣ ಮಾಡಲಾಗುವುದು. ಬೌದ್ಧ ವಿಹಾರದ ಅಭಿವೃದ್ಧಿಗೆ ಸರ್ಕಾರದಿಂದ ಸಾಧ್ಯವಾದ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುತ್ತದೆ,” ಎಂದು ಹೇಳಿದರು.
ಅವರು ಮತ್ತಷ್ಟು ತಿಳಿಸಿ, “ಗೌತಮ ಬುದ್ಧರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿ ಮತ್ತು ಸಹಬಾಳ್ವೆಯ ಮೌಲ್ಯಗಳು ಬಲಗೊಳ್ಳುತ್ತವೆ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್, ಭಂತೆ ಧಮ್ಮಾನಂದ, ಭಂತೆ ಜ್ಞಾನಸಾಗರ್, ಭಂತೆ ಸಂಘ ರಖ್ಖಿತ, ಭಂತೆ ಜ್ಞಾನಪ್ರಕಾಶ್, ಬೀದರ್ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಹಲವಾರು ಗಣ್ಯರು ಭಾಗವಹಿಸಿದ್ದರು.
ಬೌದ್ಧ ಉಪಾಸಕರು ಮತ್ತು ಉಪಾಸಕಿಯರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಭಕ್ತಿ-ಭಾವದ ವಾತಾವರಣ ಹೆಚ್ಚಿಸಿತು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
