ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
08-05-2025
ಆಪರೇಷನ್ ಸಿಂಧೂರ ಬಳಿಕ ಪಾಕ್ ಸೂಪರ್ ಲೀಗ್ ತೊರೆಯಲು ಮುಂದಾದ್ರಾ ವಿದೇಶಿ ಪ್ಲೇಯರ್ಸ್?
ಇಸ್ಲಾಮಾಬಾದ್: ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ `ಆಪರೇಷನ್ ಸಿಂಧೂರ’ ಬಳಿಕ ವಿದೇಶಿ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ ತೊರೆಯಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಏ.22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ಉಗ್ರರ ದಾಳಿಯಲ್ಲಿ 26 ಜನರು ಪ್ರಾಣತೆತ್ತರು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದರ ಮಧ್ಯೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸೇಡು ತೀರಿಸಿಕೊಂಡಿದೆ.
ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೂ ಪಾಕಿಸ್ತಾನ ಸೂಪರ್ ಲೀಗ್ ಪ್ರಕಟಗೊಂಡ ವೇಳಾಪಟ್ಟಿಯಂತೆ ಮುಂದುವರಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಿಳಿಸಿದೆ. ಈ ಕುರಿತು ಲೀಗ್‌ನಲ್ಲಿರುವ ಆರು ಫ್ರಾಂಚೈಸಿಗಳ ಮೂವರು ಮಾಧ್ಯಮ ವ್ಯವಸ್ಥಾಪಕರು ಮಾತನಾಡಿ, ಪ್ರತಿಯೊಂದು ಫ್ರಾಂಚೈಸಿಯೂ ಕನಿಷ್ಠ 5-6 ವಿದೇಶಿ ಆಟಗಾರರನ್ನು ಹೊಂದಿದ್ದು, `ಆಪರೇಷನ್ ಸಿಂಧೂರ’ ಬಳಿಕ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಇಂದು ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಪಂದ್ಯ ನಡೆಯುತ್ತಿದ್ದು, ಇನ್ನೂ 8, 9 ಮತ್ತು 10 ರಂದು ಇದೇ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಅರ್ಹತಾ ಪಂದ್ಯವು ಮೇ 13 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ಎಲಿಮಿನೇಟರ್ ಪಂದ್ಯ 1 ಮತ್ತು 2, ಮಾರ್ಕ್ಯೂ ಈವೆಂಟ್‌ನ ಫೈನಲ್ ಎರಡೂ ಕ್ರಮವಾಗಿ ಮೇ 14, 16 ಮತ್ತು 18 ರಂದು ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಆದರೆ ಇಲ್ಲಿಯವರೆಗೆ ಯಾವುದೇ ವಿದೇಶಿ ಆಟಗಾರರು ಲೀಗ್ ತೊರೆಯುವ ಕುರಿತು ಮಾತನಾಡಿಲ್ಲ ಹಾಗೂ ಯಾವುದೇ ಮನವಿಯನ್ನು ಸಲ್ಲಿಸಿಲ್ಲ ಎಂದು ಪಿಸಿಬಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
