ವರದಿಗಾರರು :
ಕೆ ಜಿ ಸುರೇಶ ||
ಸ್ಥಳ :
ಹಾಸನ
ವರದಿ ದಿನಾಂಕ :
03-12-2025
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:
ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ, ರೈತರಿಗೆ ಪರಿಹಾರ ನೀಡುವಲ್ಲಿ ಅನ್ಯಾಯ ಮಾಡುತ್ತಿದೆ, ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಕೂಡಲೇ ರೈತರ ಸಮಸ್ಯೆ ಬಗೆಹರಿಸಬೇಕು, ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಆರ್.ಸಿ. ರಸ್ತೆಯ ಜಿಲ್ಲಾ ಬಿಜೆಪಿ ಕಚೇರಿಯಿಂದ ಎತ್ತಿನ ಗಾಡಿ, ಹಾಲಿನ ಕ್ಯಾನ್ ಹಿಡಿದು ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಪಂ ಕಚೇರಿ ಎದುರು ಬಿ.ಎಂ. ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದಲ್ಲಿ ಶೇ.೫೮ ರಷ್ಟು ಜನಸಂಖ್ಯೆ ರೈತಾಪಿ ವರ್ಗವಾಗಿದ್ದು, ಶೇ.೮೫ ರೈತರು ಸಣ್ಣ ಹಿಡುವಳಿದಾರರಿದ್ದಾರೆ. ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ, ರೈತರ ಪರ ಇದ್ದ ಅನೇಕ ಯೋಜನೆ ಸ್ಥಗಿತಗೊಳಿಸಿದೆ. ಸರ್ಕಾರದ ಅಂಕಿ ಅಂಶ ಪ್ರಕಾರ ೧೪.೫೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ, ೧೦,೭೪೮ ಕೋಟಿ ನಷ್ಟವಾಗಿದೆ.೯ ಜಿಲ್ಲೆಗಳಲ್ಲಿ ಹಾನಿ ಗಂಭೀರವಾಗಿದೆ. ಆದರೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ಪರಿಹಾರ ನೀಡಿದ್ದರೂ, ಅದು ವೈಜ್ಞಾನಿಕವಾಗಿಲ್ಲ. ಇದರಿಂದ ರೈತರ ಬದುಕಿಗೆ ಹೊಡೆತ ಬಿದ್ದಿದೆ. ಸರ್ಕಾರ ಕೂಡಲೇ ಮರು ಸಮೀಕ್ಷೆ ನಡೆಸಿ, ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು. ಉ.ಕದ ಅನೇಕ ಜಿಲ್ಲೆಗಳಲ್ಲಿ ಕೊಯ್ಲು ಹಂತದಲ್ಲಿ ಸುರಿದ ಭಾರೀ ಮಳೆಯಿಂದ ತೊಗರಿಬೇಳೆ, ಹೆಸರು, ಹತ್ತಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆ ನಷ್ಟವಾಗಿದೆ. ಪಶ್ಚಿಮಘಟ್ಟ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರಾಣಿ-ಮಾನವ ಸಂಘರ್ಷ, ಕಾಫಿ-ಅಡಕೆ, ಮೆಣಸು, ಏಲಕ್ಕಿ ಬೆಳೆ ಹಾಳಾಗಿದೆ. ಇಷ್ಟಾದರೂ ಎರಡೂವರೆ ವರ್ಷದಿಂದ ಸರ್ಕಾರ ಬದುಕಿಲ್ಲ ಅನ್ನಿಸಿದೆ. ಮೆಕ್ಕೆ ಜೋಳಕ್ಕೆ ಬೆಂಬಲ ಇಲ್ಲ, ಕೃಷಿ ಸಚಿವರು ಪರಿಶೀಲನೆಗೆ ಬಂದಿಲ್ಲ, ಪರಿಹಾರವನ್ನೂ ನೀಡಿಲ್ಲ ಎಂದು ಕಿಡಿ ಕಾರಿದರು.
ರೈತರನ್ನು ಎದುರು ಹಾಕಿಕೊಂಡು ಬದುಕಿಲ್ಲ. ಪಿಎಂ ಕಿಸಾನ್ ಸಮ್ಮಾನ್ ಹಣ ಕಡಿತಗೊಳಿಸಲಾಗಿದೆ. ೬೨೦ ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವಾಗಿ ನೀಡಬೇಕು. ಇದನ್ನು ನೋಡಿದರೆ ಸರ್ಕಾರ ಯಾರ ಪರ ಇದೆ ಎಂಬ ಅನುಮಾನ ಮೂಡಿದೆ ಎಂದು ಪ್ರಶ್ನಿಸಿದರು. ಪರಿಹಾರಕ್ಕಾಗಿ ಕಬ್ಬು ಬೆಳೆಗಾರರು ತಿಂಗಳುಗಟ್ಟಲೆ ಹೋರಾಟ ಮಾಡಿದರು. ಇದು ರೈತ ವಿರೋಧಿ ಸರ್ಕಾರ, ಇದರ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು. ಸಿಎಂ ಡಿ.೬ ರಂದು ಹಾಸನಕ್ಕೆ ಬರುವುದರೊಳಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಂಎಲ್‌ಸಿ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ, ಗಿರೀಶ್ ನಂಬೀಹಳ್ಳಿ, ಎಸ್.ಡಿ. ಚಂದ್ರು, ಗಿರೀಶ್, ಬಿ.ಹೆಚ್. ನಾರಾಯಣಗೌಡ, ಪ್ರಸನ್ನಕುಮಾರ್, ವೇದಾವತಿ, ಚನ್ನಕೇಶವ, ಶೋಭನ್ ಬಾಬು, ರಾಜಕುಮಾರ್ ಮೊದಲಾದವರಿದ್ದರು. ನಂತರ ಎಡಿಸಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ಬೃಹತ್ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಬೇಲೂರು ಶಾಸಕ ಹೆಚ್.ಕೆ. ಸುೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ತುರ್ತು ನೆರವು ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
