ವರದಿಗಾರರು :
ಚಂದ್ರಶೇಖರ್ ||
ಸ್ಥಳ :
ಬೇಲೂರು
ವರದಿ ದಿನಾಂಕ :
02-12-2025
ಕಬ್ಬಡ್ಡಿಗೆ ಹೆಚ್ಚಿನ ಆದ್ಯತೆ ಅಗತ್ಯ: ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: “ಒಂದು ಕ್ರೀಡಾಂಗಣ 10 ಆಸ್ಪತ್ರೆಗಳ ಸಮಾನ,” ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಮಳಲಿ ರಸ್ತೆಯಲ್ಲಿರುವ ಅಗ್ರಹಾರ ಬನ್ನಿಮಂಟಪ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಕಬ್ಬಡ್ಡಿ ಪಂದ್ಯಾವಳಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕ್ರಿಕೆಟ್ ಅಬ್ಬರ ಹೆಚ್ಚಿರುವ ಈ ಕಾಲದಲ್ಲಿ ದೇಶೀಯ ಕ್ರೀಡೆ ಆಗಿರುವ ಕಬ್ಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. “ಆಟದಲ್ಲಿ ಸೋಲು–ಗೆಲುವು ಮುಖ್ಯವಲ್ಲ; ಭಾಗವಹಿಸುವಿಕೆ ಮುಖ್ಯ. ನಾನು ಸಹ ಶಾಲಾ ದಿನಗಳಲ್ಲಿ ಉತ್ತಮ ಕಬ್ಬಡ್ಡಿ ಆಟಗಾರನಾಗಿದ್ದೆ,” ಎಂದು ಸ್ಮರಿಸಿದರು.
ಶಾಸಕರು ಮುಂದುವರಿದು, “ದೇಶೀಯ ಕ್ರೀಡೆಗಳ ಜೊತೆಗೆ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಲಾಭವಾಗುತ್ತದೆ,” ಎಂದು ಹೇಳಿದರು. ತಾಲೂಕಿನಲ್ಲಿ ಆರು ತಿಂಗಳು ಮಳೆ ಬೀಳುವ ಕಾರಣದಿಂದ ಒಳಾಂಗಣ ಕ್ರೀಡಾಂಗಣದ ಅಗತ್ಯ ಹೆಚ್ಚಿದ್ದು, ಅದರ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವುದನ್ನು ಅವರು ತಿಳಿಸಿದರು. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಉಪಾಧ್ಯಕ್ಷ ಮುಖೇಶ್ ಶೆಟ್ಟಿ, ಬಿಜೆಪಿ ಮುಖಂಡರು ಪುನೀತ್ ಬನ್ನಹಳ್ಳಿ, ಅಶ್ವಥ್ ವಳಲಹಳ್ಳಿ, ರಘು ಪ್ರಸಾದ್, ಮಾಜಿ ಸದಸ್ಯರು ನಿರ್ವಾಣಯ್ಯ, ರೇಖಾ ರುದ್ರಕುಮಾರ್, ಉಮೇಶ್, ಸಮೀರ್ ಹಾಗೂ ಅಡಿಕೆ ವೆಂಕಟೇಶ್, ಸಂತೋಷ್, ಬಿಂಬ ರಾಜು, ಪ್ರವೀಣ್, ಚಂದ್ರು, ದೈಹಿಕ ಶಿಕ್ಷಕ ರಘು, ರೇವಣ್ಣ, ಸ್ವಾಮಿ, ವರದ, ವಸಂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
