ವರದಿಗಾರರು :
ಬಲರಾಮ್ ವಿ., ||
ಸ್ಥಳ :
ಕೆ.ಆರ್.ಪುರ
ವರದಿ ದಿನಾಂಕ :
24-11-2025
ಮಹದೇವಪುರದಲ್ಲಿ ಸುಮಧುರ ಗ್ರೂಪ್‌ನಿಂದ 1.4 ಕಿಮೀ ಸುಸ್ಥಿರ ಮಾದರಿ ರಸ್ತೆ ಉದ್ಘಾಟನೆ
ಮಹದೇವಪುರ: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸುಸ್ಥಿರ ಮಾದರಿ ರಸ್ತೆ ನಿರ್ಮಿಸುವ ಮುಂದಾಳತ್ವವನ್ನು ಸುಮಧುರ ಗ್ರೂಪ್ ಪ್ರದರ್ಶಿಸಿದ್ದು, ಇದರ ಪ್ರಯೋಜನವನ್ನು 5,000ಕ್ಕೂ ಹೆಚ್ಚು ಕುಟುಂಬಗಳು ಪಡೆಯಲಿವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಅಟಲ್ ಬೋಟಾನಿಕಲ್ ಗಾರ್ಡನ್ ಬಳಿ, ಕನ್ನಮಂಗಲ ಗೇಟ್‌ನಿಂದ ದೊಡ್ಡಬನಹಳ್ಳಿ ಗ್ರಾಮದವರೆಗೆ ಸುಮಧುರ ಇನ್ಫ್ರಾ ಸಂಸ್ಥೆ ನಿರ್ಮಿಸಿರುವ ನೂತನ ರಸ್ತೆಯನ್ನು, ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕೋರ್ಪೊರೇಟ್ ಪರಿಸರ ಜವಾಬ್ದಾರಿ (CER) ಯೋಜನೆಯಡಿ, ಸುಮಧುರ ಗ್ರೂಪ್ ವೈಟ್‌ಫೀಲ್ಡ್–ಹೊಸಕೋಟೆ ಮುಖ್ಯರಸ್ತೆಯಿಂದ ದೊಡ್ಡಬನಹಳ್ಳಿ ರಸ್ತೆಯವರೆಗಿನ 1.4 ಕಿ.ಮೀ. ರಸ್ತೆ ಸಂಪೂರ್ಣ ಮರುನಿರ್ಮಾಣ ಮಾಡಿದೆ.
ಈ ರಸ್ತೆಯನ್ನು ಆಧುನಿಕ ತಂತ್ರಜ್ಞಾನ, ಪರಿಸರ ಸ್ನೇಹಿ ಮಳೆನೀರು ನಿರ್ವಹಣಾ ವ್ಯವಸ್ಥೆ, ಸುಂದರೀಕರಣ ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ ರೂಪಿಸಲಾಗಿದ್ದು, ಇದು ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಹೆಚ್ಚು ಸುರಕ್ಷಿತ, ಹಸಿರು ಮತ್ತು ಸುಸಜ್ಜಿತ ನಗರ ರಸ್ತೆಯಾಗಿ ಸೇವೆ ಸಲ್ಲಿಸುತ್ತದೆ. ಈ ಯೋಜನೆ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ಹಸಿರುಮಯ, ಸುಲಭ ಸಂಚಾರಕ್ಕೆ ಅನುಕೂಲಕರ ಮತ್ತು ಸಂತೋಷಕರ ಜೀವನ ವಾತಾವರಣ ಒದಗಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸುಮಧುರ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧುಸೂದನ್ ಜಿ, ದೊಡ್ಡಬನಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಲೋಕೇಶ್, ಅನಿಲ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
