ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
18-10-2025
ತುಮಕೂರು: ಗಣಿಬಾಧಿತ ಗ್ರಾಮಗಳಿಗೆ ಹಸು/ಎಮ್ಮೆ ಸಾಕಾಣಿಕೆ ₹60,000 ಸಹಾಯಧನ ಅರ್ಜಿ ಆಹ್ವಾನ
ತುಮಕೂರು: ಜಿಲ್ಲೆ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ, ತಿಪಟೂರು ಮತ್ತು ಗುಬ್ಬಿ ತಾಲ್ಲೂಕಿನ ಗಣಿಬಾಧಿತ ಗ್ರಾಮಗಳಲ್ಲಿ ಫಲಾನುಭವಿಗಳಿಗೆ ಮಿಶ್ರತಳಿ ಹಾಲು ಉತ್ಪಾದನೆಗೆ ಹಸು/ಎಮ್ಮೆ ಸಾಕಾಣಿಕೆಗಾಗಿ ₹60,000 ರೂ. ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಧನದ ಪೈಕಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.90ರಷ್ಟು, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50ರಷ್ಟು ನೀಡಲಾಗುವುದು. ಉಳಿದ ಮೊತ್ತವನ್ನು ಫಲಾನುಭವಿಗಳು ವಂತಿ ರೂಪದಲ್ಲಿ ಅಥವಾ ಬ್ಯಾಂಕಿನಿಂದ ಸಾಲವಾಗಿ ಪಾವತಿಸಬೇಕು.
ನಿಯಮಾನುಸಾರ ಅಂಗವಿಕಲರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಹತ್ತಿರದ ಪಶುವೈದ್ಯ ಸಂಸ್ಥೆಯನ್ನು ಸಂಪರ್ಕಿಸಬಹುದು.
ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 19ರೊಳಗಾಗಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅರ್ಜಿಯ ಜೊತೆಗೆ ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ), ಬ್ಯಾಂಕ್ ಖಾತೆ ಪಾಸ್‌ಬುಕ್, ವಾಸಸ್ಥಳ ದೃಢೀಕರಣ ಮತ್ತು ಅಂಗವಿಕಲರ ಪ್ರಮಾಣಪತ್ರ ಲಗತ್ತಿಸಬೇಕಾಗಿದೆ. ಅರ್ಜಿದಾರರು ಗಣಿಬಾಧಿತ ಪ್ರಭಾವಿತ 5 ಕಿಮೀ ವ್ಯಾಪ್ತಿಯ ನಿವಾಸಿಯಾಗಿರಬೇಕು ಮತ್ತು RUITS ತಂತ್ರಾಂಶದಲ್ಲಿ ನೋಂದಾಯಿತರಾಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.
