ವರದಿಗಾರರು :
ನಜ್ರುಲ್ಲಾ ಬೇಗ್ , ||
ಸ್ಥಳ :
ತುಮಕೂರು
ವರದಿ ದಿನಾಂಕ :
30-10-2025
ಮಳೆಯ ಅಸಮಯದಿಂದ ಶಿರಾ ತಾಲ್ಲೂಕಿನ ಶೇಂಗಾ ಇಳುವರಿ ಕುಸಿತ — ರೈತರು ಸಂಕಷ್ಟದಲ್ಲಿ
ಶಿರಾ ತಾಲ್ಲೂಕಿನಲ್ಲಿ ಶೇಂಗಾ ಬೆಳೆಗಾರರ ಸಂಕಷ್ಟ — ಮಳೆಯ ಅಸಮಯದಿಂದ ಇಳುವರಿ ಕುಂಠಿತ ಶಿರಾ: ತಾಲ್ಲೂಕಿನ ಪ್ರಮುಖ ಬೆಳೆಯಾದ ಶೇಂಗಾ ಈ ವರ್ಷ ಮಳೆಯ ಅಸಮಯದಿಂದ ತೀವ್ರ ಹಾನಿಗೊಳಗಾಗಿದೆ. ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾದರೂ, ಸಮಯಕ್ಕೆ ಸರಿಯಾಗಿ ಸುರಿಯದ ಕಾರಣ ಶೇಂಗಾ ಬಿತ್ತನೆ ಗುರಿ ತಲುಪಲಿಲ್ಲ. 25,040 ಹೆಕ್ಟೇರ್ ಗುರಿಯ ವಿರುದ್ಧ ಕೇವಲ 15,715 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಮಳೆ ಬಾರದ ಕಾರಣ ಅನೇಕ ರೈತರು ಶೇಂಗಾ ಬದಲು ರಾಗಿಯತ್ತ ತಿರುಗಿಕೊಂಡಿದ್ದಾರೆ. ಇದರಿಂದಾಗಿ 12,913 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ನಡೆದಿದೆ.
ಶೇಂಗಾ ಬಿತ್ತನೆಯ ಸಮಯದಲ್ಲಿ ಬಂದಿದ್ದ ಮಳೆಯ ನಂತರ ಎರಡು ತಿಂಗಳು ಮಳೆ ಬಾರದ ಕಾರಣ ಗಿಡಗಳು ಒಣಗಿ ಹೋಗಿವೆ. ಕೆಲವೆಡೆ ಎಲೆ ಚುಕ್ಕೆ ರೋಗ ತಗುಲಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಈಗಾಗಲೇ ಶೇ. 80ರಷ್ಟು ಶೇಂಗಾ ಕಟಾವು ಮುಗಿದಿದೆ. ಆದರೆ ಅಕ್ಟೋಬರ್‌ನಲ್ಲಿ ಸತತ ಮಳೆಯಿಂದ ಶೇಂಗಾ ಒಣಗಿಸಲು ಸಾಧ್ಯವಾಗದೆ ರೈತರು ಬಣವೆ ಮಾಡಿ ಟಾರ್ಪಲ್ ಮುಚ್ಚಿದ್ದಾರೆ. ಮಳೆ ಮುಂದುವರೆದರೆ ಕಟಾವಿಗೆ ಬಾರದ ಶೇಂಗಾ ಭೂಮಿಯಲ್ಲೇ ಮೊಳಕೆ ಬರುವ ಭೀತಿ ವ್ಯಕ್ತವಾಗಿದೆ. ಇಳುವರಿ ಕುಸಿತದಿಂದ ರೈತರ ಸಂಕಷ್ಟ ರೈತರು ಶೇಂಗಾ ಬೆಳೆಗೆ ಎಕರೆಗೆ ₹30–35 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಇಳುವರಿ ನಿರೀಕ್ಷಿತ ಮಟ್ಟಕ್ಕಿಂತ ಬಹಳ ಕಡಿಮೆ. ಎಕರೆಗೆ ಎಂಟು ಕ್ವಿಂಟಲ್ ಬರಬೇಕಿದ್ದ ಶೇಂಗಾ, ಒಂದೂವರೆ ರಿಂದ ಮೂರು ಕ್ವಿಂಟಲ್ ಮಟ್ಟಕ್ಕೆ ಇಳಿದಿದೆ. ಖರ್ಚು ಮಾಡಿದ ಹಣ ವಾಪಸ್ಸು ಸಿಗದ ಸ್ಥಿತಿಯಾಗಿದೆ. ಶೇಂಗಾ ಬೆಳೆ ನಂಬಿಕೊಂಡು ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿದ್ದಾರೆ.
