ವರದಿಗಾರರು :
ಸಂಗನಗೌಡ ಎಚ್ ಗಬಸಾವಳಗಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
14-08-2025
ಜೀವದ ಹಂಗು ತೊರೆದು ಜೀವನಕ್ಕೆ ಆಧಾರವಾದ ಎತ್ತುಗಳ ಜೀವ ರಕ್ಷಿಸಿದ ರೈತ
ಪ್ರವಾಹದಲ್ಲಿ ಕೊಚ್ಚಿ ಹೋದ ಎತ್ತುಗಳನ್ನು ಪ್ರಾಣಪಣವಿಟ್ಟು ರಕ್ಷಿಸಿದ ರೈತ ತಾಳಿಕೋಟಿ: ಹರಣಾಳ ಗ್ರಾಮದ ಬಡ ರೈತ ಮಾಳಪ್ಪ ಬಿರಾದಾರ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋದ ಜೋಡೆತ್ತುಗಳನ್ನು ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಡೋಣಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ, ಸೋಮವಾರ ಮಾಳಪ್ಪ ಬಿರಾದಾರನು ಗ್ರಾಮದ ಹತ್ತಿರದ ನದಿತೀರದಲ್ಲಿ ತನ್ನ ಎರಡು ಎತ್ತುಗಳನ್ನು ಸ್ನಾನ ಮಾಡಿಸಲು ಕರೆದುಕೊಂಡು ಹೋದನು. ಆದರೆ, ತೀವ್ರ ಪ್ರವಾಹದಿಂದ ಎತ್ತುಗಳು ಕಾಲುಜಾರಿ ನೀರಿನಲ್ಲಿ ಬಿದ್ದು, ಸುಮಾರು ಒಂದು ಕಿಲೋಮೀಟರ್ ದೂರಕ್ಕೆ ಹರಿದುಹೋದವು. ಈ ದೃಶ್ಯವನ್ನು ಕಂಡ ಮಾಳಪ್ಪ, ಹಿಂದೆ ಮುಂದೆ ಯೋಚಿಸದೆ ನದಿಗೆ ಜಿಗಿದು, ಮೊದಲು ಒಂದು ಎತ್ತನ್ನು ದಡಕ್ಕೆ ತಂದು ಕಟ್ಟಿ, ಬಳಿಕ ಮತ್ತೊಮ್ಮೆ ನೀರಿಗೆ ಇಳಿದು ಎರಡನೇ ಎತ್ತನ್ನೂ ಸುರಕ್ಷಿತವಾಗಿ ದಡಕ್ಕೆ ತಂದು ಸೇರಿಸಿದನು. ನೀರಿನ ಪ್ರವಾಹ ತೀವ್ರವಾಗಿದ್ದರಿಂದ, ಗ್ರಾಮಸ್ಥರು "ನೀರಿಗೆ ಇಳಿಯಬೇಡ, ನಿನ್ನ ಜೀವ ಮುಖ್ಯ" ಎಂದು ಎಚ್ಚರಿಸಿದರೂ, ತನ್ನ ಬದುಕಿಗೆ ಆಧಾರವಾಗಿದ್ದ ಎತ್ತುಗಳನ್ನು ಬಿಡದೇ ಮಾಳಪ್ಪ ಸಾಹಸ ಪ್ರದರ್ಶಿಸಿದನು. ಈ ಘಟನೆಯನ್ನು ಕಣ್ಣಾರೆ ಕಂಡ ಗ್ರಾಮಸ್ಥರು, "ಮಾಳಪ್ಪ ಬಿರಾದಾರನ ಈ ಧೈರ್ಯಮಯ ಕಾರ್ಯಕ್ಕೆ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಬೇಕು" ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಮುತ್ತು ಚಳ್ಳಗಿ, ಹನುಮಂತರಾಯ ಬಿರಾದಾರ, ಮಲ್ಲಣ್ಣ ಚಳ್ಳಗಿ, ವೆಂಕಪ್ಪ ಯಡಹಳ್ಳಿ, ಶಂಕ್ರಪ್ಪ ಚಳ್ಳಗಿ, ಈರಪ್ಪ ಅಂಬಳನೂರ, ಭೀಮಾಶಂಕರ ತುಂಬಗಿ, ತಾರಾಬಾಯಿ ಹಜೇರಿ, ಮೀನಾಕ್ಷಿ ರಜಪೂತ ಹಾಗೂ ಹಲವರು ಹಾಜರಿದ್ದರು.
