ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
08-10-2025
ಮಳೆ ಕೈಕೊಟ್ಟ ಕಡಲೆಕಾಯಿ: ರೈತರು ಸಂಕಟದಲ್ಲಿ
ಪ್ರತಿ ವರ್ಷ ಆರಂಭದ ಮಳೆ ಬಿದ್ದ ಬಳಿಕ ಆಶಾವಾದದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗುವ ಪಾವಗಡ ತಾಲ್ಲೂಕಿನ ರೈತರು, ಈ ಬಾರಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯ ನಡುವೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಾವಗಡ, ಮಧುಗಿರಿ, ಶಿರಾ ಹಾಗೂ ಕೊರಟಗೆರೆ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ಆಗ್ರಹಿಸಿದ್ದಾರೆ.
ತಾಲೂಕಿನ ವಿವಿಧ ರೈತರ ಜಮೀನಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ವೀಕ್ಷಣೆ ನಡೆಸಿದ ಪೂಜಾರಪ್ಪ, "ಮಳೆ ಆಶ್ರಿತ ಕಡಲೆಕಾಯಿ ಬೆಳೆ ಈ ಬಾರಿಯೂ ರೈತರಿಗೆ ಕೈಕೊಟ್ಟಿದೆ. ಹಲವು ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ ರೋಗ ಮತ್ತು ಮಳೆಯ ಕೊರತೆ ಈ ಎರಡೂ ಸೇರಿ ಸಂಪೂರ್ಣ ನಷ್ಟಕ್ಕೆ ಕಾರಣವಾಗಿವೆ," ಎಂದರು.
ಬ್ಯಾಡನೂರು ಗ್ರಾಮದ ಸರ್ವೆ ನಂ.182ರಲ್ಲಿ ರೈತ ಚಿತ್ತಪ್ಪ 3 ಎಕರೆ ಜಮೀನಿನಲ್ಲಿ ಬಿತ್ತಿದ ಕಡಲೆಕಾಯಿ ಸಂಪೂರ್ಣ ನಾಶವಾಗಿದೆ. ಪ್ರಥಮ ಹಂತದ ಬಿತ್ತನೆಗೆ ಬೆಂಕಿ ಸೀಡೆ ರೋಗ ತೀವ್ರವಾಗಿ ಆವರಿಸಿದ್ದು, ಎರಡನೇ ಹಂತದ ಬಿತ್ತನೆಗೆ ಮಳೆಯ ಕೊರತೆ ಕಾಡಿದೆ. ಇದರಿಂದಾಗಿ ರೈತರು ಮತ್ತೆ ಸಂಕಟಕ್ಕೆ ಸಿಲುಕಿದ್ದಾರೆ.
ತಾಲ್ಲೂಕುಗಳ ಆರ್ಥಿಕ ಸ್ಥಿತಿ ಬಡಾವಣೆಯಲ್ಲಿದೆ. ಪ್ರತಿ ವರ್ಷವೂ ಮಳೆಯ ನಿರೀಕ್ಷೆಯಲ್ಲಿ ಕೃಷಿಗೆ ಕೈಹಾಕುವ ರೈತರು, ಬೆಳೆ ನಾಶದಿಂದಾಗಿ ಸಾಲದ ಹೊರೆ ತಾಳಲಾಗದೆ ಆತ್ಮಹತ್ಯೆಯ ಹಾದಿ ತಲುಪುವ ಹಂತಕ್ಕೇ ಬರಲಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವು ತ್ವರಿತ ಕ್ರಮ ತೆಗೆದುಕೊಂಡು, ಈ ನಾಲ್ಕು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಪೂಜಾರಪ್ಪ ಒತ್ತಾಯಿಸಿದರು.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಸ್ಪಂದಿಸಿ, ರೈತರ ನೆರವಿಗೆ ಧಾವಿಸಬೇಕು ಎಂಬುದು ಸ್ಥಳೀಯ ರೈತರ ಆಗ್ರಹವಾಗಿದೆ.
