ವರದಿಗಾರರು :
ಕೊಟ್ರಪ್ಪ ಎಚ್., ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
23-10-2025
ವಾಯುಭಾರ ಕುಸಿತ : ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು–ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 23ರಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕೆಲವೆಡೆ ರಭಸದ ಮಳೆಯ ಜೊತೆಗೆ ವೇಗದ ಗಾಳಿಯೂ ಬೀಸುವ ಸಾಧ್ಯತೆ ಇದೆ. ಅಕ್ಟೋಬರ್ 28ರವರೆಗೆ ರಾಜ್ಯದಾದ್ಯಂತ ಮಳೆಯ ಪ್ರಭಾವ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಇಂದಿನಿಂದಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಸಂಜೆ ನಂತರ ಬಹುತೇಕ ಎಲ್ಲಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಗಂಟೆಗೆ 30–40 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಮುನ್ಸೂಚನೆ ನೀಡಿದೆ. ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಕರಾವಳಿಯಲ್ಲಿ ಗಂಟೆಗೆ 55 ಕಿ.ಮೀ ವೇಗದ ಗಾಳಿಯ ಸಾಧ್ಯತೆಯೂ ಇದೆ.
