ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
02-10-2025
ಕುಸಿದ ಮನೆ, ಬೆಳೆ ಹಾನಿ ವೀಕ್ಷಿಸಿದ ಶಾಸಕ ಜೆ.ಟಿ.ಪಾಟೀಲ
ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅತೀಯಾದ ಮಳೆಯಿಂದಾಗಿ ವಿವಿಧೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಹೀಗಾಗಿ ಜಿಲ್ಲೆಯ ಬೀಳಗಿ ತಾಲೂಕಿನ ವ್ಯಾಪ್ತಿಯ ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳಲ್ಲಿ ಹಾನಿಗೊಳಗಾದ ವಿವಿಧ ಬೆಳೆಗಳು ಹಾಗೂ ಕುಸಿದ ಮಣ್ಣಿನ ಮನೆಗಳನ್ನು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ವೀಕ್ಷಣೆ ಮಾಡಿದರು. ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳ ವ್ಯಾಪ್ತಿಯ ಹಾನಿಗೊಳಗಾದ ಈರುಳ್ಳಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಿದರು. ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಅತೀಯಾದ ಮಳೆಯಿಂದಾಗಿ ಸರಿಯಾಗಿ ಬೆಳೆ ಬಾರದೆ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಆದ್ದರಿಂದ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೊಸ ರೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಕುಸಿದ ಮಣ್ಣಿನ ಮನೆಗಳನ್ನು ವೀಕ್ಷಣೆ ಮಾಡಿ ತುರ್ತಾಗಿ 5 ಸಾವಿರ ರೂ.ಗಳನ್ನು ಒದಗಿಸುವ ಕೆಲಸವಾಗಬೇಕು. ಬಿದ್ದ ಮನೆಗಳ ಸರ್ವೆ ನಿಖರವಾಗಿರಬೇಕು. ಯಾವುದೇ ಮನೆಗಳು ಬಿಟ್ಟು ಹೋಗಬಾರದು
ಸರ್ವೆ ಕಾರ್ಯದಲ್ಲಿ ಮನೆ ಬಿದ್ದಿರುವ ಬಗ್ಗೆ ಶೇಕಡಾವಾರು ಪ್ರಮಾಣವನ್ನು ಪರಿಶೀಲಿಸಿ ಸೂಕ್ತ ಪರಿಹಾರ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಮಯದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಬೀಳಗಿ ತಹಶೀಲ್ದಾರ ವಿನೋದ ಹತ್ತಳ್ಳಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
