ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ ಜಿಲ್ಲಾ
ವರದಿ ದಿನಾಂಕ :
05-11-2025
ರಾಜಕಾಲುವೆ, ವಿದ್ಯುತ್ ದೀಪ ಸೇರಿದಂತೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕ್ರಮ: ಆಯುಕ್ತೆ ರೇಣುಕಾ ಭರವಸೆ
ದಾವಣಗೆರೆ: ನಗರದ 28 ಹಾಗೂ 37ನೇ ವಾರ್ಡ್ ಪ್ರದೇಶಗಳಲ್ಲಿ ನಾಗರಿಕರು ಹಲವು ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಆಯುಕ್ತೆ ರೇಣುಕಾ, ಮಾಜಿ ಸದಸ್ಯ ಎ. ನಾಗರಾಜ್ ಅವರೊಂದಿಗೆ ರಾಜಕಾಲುವೆ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಮತ್ತು ವಾರ್ಡ್ ಟಿಕೆಟ್ ಆಕಾಂಕ್ಷಿ ಗಜೇಂದ್ರ ಜಗನ್ನಾಥ್ ಅವರು ಮಾತನಾಡಿ, “ಮಳೆಯಾಗುವ ವೇಳೆ ರಾಜಕಾಲುವೆಯ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಸಚಿವ ಮಲ್ಲಿಕಾರ್ಜುನ್ ಅವರ ಗಮನಕ್ಕೂ ವಿಷಯ ತರಲಾಗಿದೆ” ಎಂದು ತಿಳಿಸಿದರು. ಆಯುಕ್ತೆ ರೇಣುಕಾ ಅವರು ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿ, “ರಾಜಕಾಲುವೆಯಲ್ಲಿ ನೀರು ನಿಂತಿರುವುದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿರುವುದು ಕಂಡು ಬಂದಿದೆ. ತಕ್ಷಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ರಾಜಕಾಲುವೆಯ ಮೇಲೆ ಯಾರೇ ಅಕ್ರಮ ಒತ್ತುವರಿ ಮಾಡಿಕೊಂಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ” ಎಂದು ಹೇಳಿದರು.
ಅವರು ಮುಂದುವರಿದು, “ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗುವ ಸಮಸ್ಯೆ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬೀದಿ ದೀಪಗಳು ಹಾಳಾಗಿರುವುದು ಹಾಗೂ ರಸ್ತೆಗಳ ಗುಂಡಿಗಳು ಮುಚ್ಚುವ ಕೆಲಸಕ್ಕೂ ಆದ್ಯತೆ ನೀಡಲಾಗುತ್ತದೆ” ಎಂದು ಭರವಸೆ ನೀಡಿದರು. ಗಜೇಂದ್ರ ಜಗನ್ನಾಥ್ ಅವರು ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ, ಒಳಚರಂಡಿ ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಯದೇ ಉಳಿದಿವೆ ಎಂದು ಸೂಚಿಸಿ, ಜನರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಮುಖಂಡರು ಡಿ.ಎಸ್. ಹೇಮಂತ್ (ಶಿವಣ್ಣ), ಸಂತೋಷ್ ಕುಮಾರ್, ಭಾಸ್ಕರ್, ರಾಜೀವ, ವಿಷ್ಣುವರ್ಧನ್, ಆಟೋ ನಿಲ್ದಾಣದ ಬಳಗದವರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
