ವರದಿಗಾರರು :
ಸಂಗನಗೌಡ ಗಬಸಾವಳಗಿ, ತಾಳಿಕೋಟಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
13-11-2025
ಶಾಸಕ ಸಿ.ಎಸ್. ನಾಡಗೌಡರಿಗೆ ಸಚಿವ ಸ್ಥಾನ ನೀಡಿ — ಯುವ ಕಾಂಗ್ರೆಸ್ ನಾಯಕ ಶಾಂತಗೌಡ ಕೇಸರಭಾವಿಯ ಬೇಡಿಕೆ
ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಾಂತಗೌಡ ಕೇಸರಭಾವಿ (ಪಾಟೀಲ) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ನಾಡಗೌಡರು ಕಟ್ಟಾ ಕಾಂಗ್ರೆಸ್ಸಿಗರಾಗಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಷದ ಶಕ್ತಿವರ್ಧನೆಗೆ ಸತತವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು. ಮುದ್ದೇಬಿಹಾಳ ಮತಕ್ಷೇತ್ರದಿಂದ ನಾಡಗೌಡರು ಈಗಾಗಲೇ ಆರು ಬಾರಿ ಶಾಸಕರಾಗಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಈ ಹಿಂದೆ ಅವರು ಕಾರ್ಮಿಕ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಶಾಂತಗೌಡ ಕೇಸರಭಾವಿ ನೆನಪಿಸಿದರು.
ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಗೌಡರಿಗೆ ಸಚಿವ ಸ್ಥಾನ ನೀಡುವುದಾಗಿ ಆಶ್ವಾಸನೆ ನೀಡಿದ್ದರು ಎಂದು ಅವರು ಹೇಳಿದರು. “ರಾಜ್ಯದ ಹಿರಿಯ ಮತ್ತು ನಿಷ್ಠಾವಂತ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಸಿ.ಎಸ್. ನಾಡಗೌಡರು ಸಚಿವ ಸ್ಥಾನ ನಿಭಾಯಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಮುದ್ದೇಬಿಹಾಳ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ,” ಎಂದು ಶಾಂತಗೌಡ ಕೇಸರಭಾವಿ ಹೇಳಿದರು.
ಅವರು ಮುಂದುವರಿದು, “ಮುಖ್ಯಮಂತ್ರಿಗಳು ತಮ್ಮ ಮಾತು ಪಾಲಿಸಿ, ನಾಡಗೌಡರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಜನರ ಗೌರವ ಉಳಿಸಬೇಕು” ಎಂದು ಒತ್ತಾಯಿಸಿದರು
ಅವರು ಮುಂದುವರಿದು, “ಮುಖ್ಯಮಂತ್ರಿಗಳು ತಮ್ಮ ಮಾತು ಪಾಲಿಸಿ, ನಾಡಗೌಡರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಜನರ ಗೌರವ ಉಳಿಸಬೇಕು” ಎಂದು ಒತ್ತಾಯಿಸಿದರು
