ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
21-11-2025
ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಬೇಡಿಕೆ: ಸಚಿವರೊಂದಿಗೆ ಸಂಘಗಳ ಪ್ರತಿನಿಧಿಗಳ ಚರ್ಚೆ
ಬೀದರ: ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ವಿವಿಧ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಕುರಿತು ಚರ್ಚಿಸಲು ನವೆಂಬರ್ 19ರಂದು ಮಧ್ಯಾಹ್ನ 12 ಗಂಟೆಗೆ ವಿಕಾಸ ಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 222ರಲ್ಲಿ ಮಹತ್ವದ ಸಭೆ ನಡೆಯಿತು. ಸಭೆಗೆ ಮಾನ್ಯ ಲೋಕೋಪಯೋಗಿ ಸಚಿವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘ ಹಾಗೂ ಸುವರ್ಣ ಕರ್ನಾಟಕ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ಭಾಗವಹಿಸಿದರು. ಉತ್ತರ ಕರ್ನಾಟಕ ಅಧ್ಯಕ್ಷ ರಾಜಕುಮಾರ್ ಸೋನೆ, ರಾಜ್ಯದ ಎಲ್ಲಾ ಜಿಲ್ಲಾ ಅಧ್ಯಕ್ಷರು, ಅನೇಕ ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಖ್ಯಾತ ಗುತ್ತಿಗೆದಾರ ವೈಜಿನಾಥ ಎನಗುಂದೆ ಉಪಸ್ಥಿತರಿದ್ದರು.
ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ (Piece Work Order) ಆಧಾರದ ಮೇಲೆ ಹೆಚ್ಚುವರಿ ಕಾಮಗಾರಿಗಳನ್ನು ನೀಡುವ ಅಗತ್ಯವನ್ನು ಪ್ರತಿನಿಧಿಗಳು ಒತ್ತಿಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಸಿ/ಎಸ್ಟಿ ವರ್ಗದ ನೂರಾರು ಗುತ್ತಿಗೆದಾರರು ಉದ್ಯೋಗವಿಲ್ಲದೆ ಖಾಲಿ ಕುಳಿತಿರುವ ಸ್ಥಿತಿಯನ್ನು ಅವರು ಸಚಿವರ ಗಮನಕ್ಕೆ ತಂದರು. ಹೆಚ್ಚುವರಿ (Additional Grants) ಬಿಡುಗಡೆ ಮಾಡಿದರೆ ತುಂಡು ಕಾಮಗಾರಿಗಳು ಹೆಚ್ಚಾಗಿ ಸಿಗುವ ಸುಭದ್ರ ಸಾಧ್ಯತೆಗಳಿವೆ ಎಂದು ಗುತ್ತಿಗೆದಾರರು ಅಭಿಪ್ರಾಯಪಟ್ಟರು.
ಇದೇ ವೇಳೆ ಎಲ್ಲಾ ಶಾಸಕರು ತಮ್ಮ ಅನುದಾನವನ್ನು ಏಖೈಐ ಸಂಸ್ಥೆಗೆ ವರ್ಗಾಯಿಸುವ ಬದಲು, ಲೋಕೋಪಯೋಗಿ ಇಲಾಖೆಯ ಮೂಲಕವೇ ಕಾಮಗಾರಿಗಳನ್ನು ನೀಡಬೇಕೆಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು. ಇದರಿಂದ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಸಮರ್ಪಕ ಅವಕಾಶ ದೊರಕುತ್ತದೆ ಎಂದು ಅವರು ಹೇಳಿದರು. “ನಮಗೆ ಕೆಲಸಗಳೇ ಸಿಗದಿದ್ದರೆ ನಮ್ಮ ಭವಿಷ್ಯ ಹೇಗೆ?” ಎಂದು ಗುತ್ತಿಗೆದಾರರು ಸಚಿವರಿಗೆ ಮನವಿ ಮಾಡಿದ್ದು, ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲು ವಿನಂತಿಸಿದರು. ಪ್ರತಿನಿಧಿಗಳ ಬೇಡಿಕೆಗಳನ್ನು ಆಲಿಸಿದ ಸಚಿವರು, ಶೀಘ್ರದಲ್ಲಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
