ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
21-11-2025
ಇ–ಸ್ವತ್ತು ದೌರ್ಭಾಗ್ಯ ಕೊನೆಗಾಣುತ್ತಾ? ಪಾಲಿಕೆಯಲ್ಲಿ ಡಿಸಿಯ ನೇರ ದಂಡಾಯಾತ್ರೆ
ತುಮಕೂರು: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಇ–ಸ್ವತ್ತು ದಾಖಲೆಗಳನ್ನು ನೀಡುವಲ್ಲಿ ಉಂಟಾಗುತ್ತಿರುವ ವಿಳಂಬ, ಅಸಮರ್ಪಕ ಸೇವೆ ಮತ್ತು ಆಡಳಿತದ ಅವ್ಯವಸ್ಥೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇ–ಸ್ವತ್ತು ದಾಖಲೆ ಸಿದ್ಧಪಡಿಸುವಲ್ಲಿ ವಿಳಂಬ, ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ, ಸಾರ್ವಜನಿಕರ ಕೆಲಸ ನಿರ್ಲಕ್ಷಿಸುವ ಬಗ್ಗೆ ಹಲವು ದೂರುಗಳು ಜಿಲ್ಲಾಧಿಕಾರಿಗಳಿಗೆ ಬಂದ ಹಿನ್ನೆಲೆಯಲ್ಲಿ ಅವರು ಯಾವುದೇ ಪೂರ್ವ ಸೂಚನೆ ನೀಡದೆ ನೇರವಾಗಿ ಪಾಲಿಕೆ ಕಚೇರಿಗೆ ಭೇಟಿ ನೀಡಿದರು. ಪರಿಶೀಲನೆ ವೇಳೆ ಅಲ್ಲಿನ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಚಿತ್ರಣ ಅವರನ್ನು ಕ್ಷಣಮಾತ್ರಕ್ಕೂ ಬೆಚ್ಚಿಬೀಳುವಂತೆ ಮಾಡಿತು.
ಪಾಲಿಕೆಯ ಆಸ್ತಿ ದಾಖಲೆ ವಿಭಾಗದಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಲಾದ ಅನೇಕ ಅರ್ಜಿಗಳು ಕಂದಾಯ ನಿರೀಕ್ಷಕರ ಹಂತದಲ್ಲೇ ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿರುವುದು ಪರಿಶೀಲನೆಯ ವೇಳೆ ಬಹಿರಂಗವಾಯಿತು. ದಾಖಲೆಗಳ ಪರಿಶೀಲನೆಗೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಕೆಲವು ವಿಭಾಗಗಳಲ್ಲಿ ಅಧಿಕಾರಿಗಳ ಅಸಮರ್ಪಕ ಕೆಲಸದ ಧೋರಣೆ, ಸಾರ್ವಜನಿಕರ ಮೇಲಿನ ನಿರ್ಲಕ್ಷ್ಯ ಮತ್ತು ವಿಳಂಬ ವ್ಯವಹಾರಗಳು ಪಾಲಿಕೆಯ ನಿಜಸ್ವರೂಪವನ್ನು ಹೊರಹೊಮ್ಮಿಸಿದವು, ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಿಡಿಕಾರಿದ್ದು— “ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು. ಇದೇ ರೀತಿ ವರ್ತನೆ ಮುಂದುವರಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತೀವ್ರ ಎಚ್ಚರಿಕೆ ನೀಡಿದರು. ಅಧಿಕಾರಿಗಳಿಂದ ಸಲ್ಲಿಸಲಾದ ಅಂಕಿಅಂಶಗಳ ಪ್ರಕಾರ, ನೂರಾರು ಇ–ಸ್ವತ್ತು ಅರ್ಜಿಗಳು ಕಂದಾಯ ನಿರೀಕ್ಷಕರ ಮಟ್ಟದಲ್ಲಿ ಬಾಕಿ ಉಳಿದಿದ್ದು, ಇದರ ಪರಿಣಾಮವಾಗಿ ನಾಗರಿಕರು ಸಮಯಕ್ಕೆ ದಾಖಲೆಗಳನ್ನು ಪಡೆಯಲು ಆಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾರ್ವಜನಿಕರನ್ನು ದಿನಗಟ್ಟಲೆ ಕಚೇರಿ ಸುತ್ತ ಸುತ್ತಿಸುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಿದರ್ಶನ ಎಂದು ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು. ಈ ದಿಢೀರ್ ಪರಿಶೀಲನೆಯ ಮೂಲಕ ಪಾಲಿಕೆ ಆಡಳಿತದಲ್ಲಿ ಶಿಸ್ತು ತರಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.
