ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
14-11-2025
“ಬೀದರ್‌ನಲ್ಲಿ ಕಬ್ಬು ದರ ಹೋರಾಟ ಚುರುಕು: ಜಿಲ್ಲಾಧಿಕಾರಿ ಸಭೆ ವಿಫಲ—ರೈತರ ಬೃಹತ್ ಧರಣಿ”
ಪ್ರತಿ ಟನ್ ಕಬ್ಬಿಗೆ ಸರ್ಕಾರ ಘೋಷಿಸಿರುವ ರೂ.3,300 ದರವನ್ನು ಜಿಲ್ಲೆಯಲ್ಲಿ ಕೂಡ ಜಾರಿಗೆ ತರಬೇಕೆಂದು ಒತ್ತಾಯಿಸಿ, ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ಪ್ರವಾಸಿ ಮಂದಿರದ ಎದುರು ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಧರಣಿ ನಡೆಸಿದರು.
ಕಬ್ಬು ಬೆಲೆ ನಿಗದಿ ಕುರಿತಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಂದು ನಡೆಸಲಾದ ಸಂಭಾಷಣೆ ಫಲಕಾರಿಯಾಗದೆ ಸಭೆ ವಿಫಲವಾಯಿತು. “ರೈತರ ಕಣ್ಣೀರು ಒರೆಸಬೇಕು ಆಡಳಿತ, ಕಣ್ಣೊರೆಸುವ ನಾಟಕ ಬೇಡ” ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರಿನ ಪ್ರಮುಖ ಬೆಳೆಗಳಿಗೆ ತೀವ್ರ ನಷ್ಟವಾಗಿರುವುದರಿಂದ ರೈತರು ಸಂಕಷ್ಟದಲ್ಲಿರುವ ಬಗ್ಗೆ ಅವರು ಗಮನ ಸೆಳೆದರು. ಸುಮಾರು 50 ಸಾವಿರ ಎಕರೆಯಲ್ಲಿ ಬೆಳೆದಿರುವ ಕಬ್ಬಿನಿಂದ ಈ ಸಾಲಿನಲ್ಲಿ 15 ಲಕ್ಷ ಟನ್‌ಗಳಿಗಿಂತ ಹೆಚ್ಚು ಉತ್ಪಾದನೆ ನಿರೀಕ್ಷೆಯಿದೆ. ಈ ಪರಿಸ್ಥಿತಿಯಲ್ಲಿ ನ್ಯಾಯಯುತ ದರ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರೈತರು ಒತ್ತಾಯಿಸಿದರು.
2025–26ರ ಸಗ್ಗು ಸಾಲಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.3,300 ನಿಗದಿ ಮಾಡಿ, ಸಕ್ಕರೆ ಕಾರ್ಖಾನೆಗಳಿಂದ ಪಾವತಿ ಕಡ್ಡಾಯಗೊಳಿಸುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಬೇಡಿಕೆ ಇಟ್ಟಿವೆ.
ಧರಣಿಯಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪಾ ಆಣದೂರೆ, ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ, ಶಂಕರೆಪ್ಪಾ ಮರ್ಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ ಪಾಟೀಲ್, ಬಾಬು ಹೊನ್ನಾ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿ, ವಿಠಲ್ ರಾವ, ನಾಗಶೆಟ್ಟಿ, ಭೀಮರಾವ, ಖಮರ ಪಟೇಲ್ ಸೇರಿದಂತೆ ಅನೇಕ ರೈತ ನಾಯಕರು ಭಾಗವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
