ವರದಿಗಾರರು :
ಶಿವಲಿಂಗ ಕುಂಬಾರ್ ||
ಸ್ಥಳ :
ಜಮಖಂಡಿ
ವರದಿ ದಿನಾಂಕ :
28-10-2025
ರೈತರಿಗೆ ನ್ಯಾಯ ಬೆಲೆ ನೀಡಬೇಕು: ಹನುಮಂತ ಮಗದುಮ್ ಆಗ್ರಹ
ಜಮಖಂಡಿ: ಕಬ್ಬಿನ ಹಂಗಾಮು ಆರಂಭದ ಹಿನ್ನೆಲೆ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹನುಮಂತ ಮಗದುಮ್ ಆಗ್ರಹಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಉಪ ತಹಶೀಲ್ದಾರ ಕೆ.ವೈ. ಬಿದರಿ ಮೂಲಕ ಸರ್ಕಾರಕ್ಕೆ ಹಾಗೂ ಕಾರ್ಖಾನೆ ವ್ಯವಸ್ಥಾಪಕ ಮಂಡಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು 2021–22 ಸಾಲಿನ ರೈತರ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬೇಡಿಕೊಂಡರು. ಜೊತೆಗೆ ಕಬ್ಬು ಕಟಾವುದಾರರ ಬಿಲ್‌ಗಳನ್ನು ಅವರ ಖಾತೆಗೆ ತಕ್ಷಣ ಜಮಾ ಮಾಡಲು ಸೂಚಿಸಿದರು. ರೈತರ ಎರಡನೇ ಕಂತಿನ ಹಣವನ್ನು ಶೀಘ್ರ ನೀಡಬೇಕೆಂದು ಆಗ್ರಹಿಸಿದರು.
ಹನುಮಂತ ಮಗದುಮ್ ಮುಂದುವರೆದು, “ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ಗೋವಿನ ಜೋಳ ಖರೀದಿ ಕೇಂದ್ರವನ್ನು ಜಮಖಂಡಿಯಲ್ಲಿ ತೆರೆಯಬೇಕು, ಇದರಿಂದ ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತದೆ,” ಎಂದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಂಡಿದ್ದು, ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಾಸರಿಗಿಂತ ಶೇಕಡಾ 10 ಕ್ಕೂ ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಮತ್ತು ಮಳೆ ಪರಿಣಾಮದಿಂದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಈ ಹಿನ್ನೆಲೆಯಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಬೆಕ್ಕೇರಿ, ಕಲ್ಲಪ್ಪ ಬಿರಾದಾರ್, ಹನುಮಂತ ಯಮಗಾರ, ರಮೇಶ್ ಕುರಣಿ, ಸಂತೋಷ ಮಮದಾಪೂರ, ಮಂಜು ಕಡಪಟ್ಟಿ, ಬಾಳಪ್ಪ ಕಡಪಟ್ಟಿ, ಲಕ್ಷ್ಮಣ ಬಂಕಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
