ವರದಿಗಾರರು :
ಮುತ್ತುರಾಜ್ ||
ಸ್ಥಳ :
ಕೊರಟಗೆರೆ
ವರದಿ ದಿನಾಂಕ :
28-11-2025
ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ–ಕಲೋತ್ಸವ
ವಿದ್ಯಾರ್ಥಿಗಳ ಪ್ರತಿಭೆ ಹೊರತರುವುದು ಸಮಾಜದ ಜವಾಬ್ದಾರಿ: ತಹಶೀಲ್ದಾರ್ ಮಂಜುನಾಥ್ ಕೊರಟಗೆರೆ: ಪಟ್ಟಣದ ಸರ್ಕಾರಿ ಬಾಲಕಿಯರ ಪೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿ ಇರುವುದರಿಂದ ಅದನ್ನು ಹೊರತರುವ ಕಾರ್ಯ ಶಿಕ್ಷಕರು ಮತ್ತು ಪೋಷಕರು ಕೈಗೊಳ್ಳಬೇಕು ಎಂದು ಹೇಳಿದರು. “ಯಾವುದೇ ವಿದ್ಯಾರ್ಥಿ ಮಹಾನ್ ವ್ಯಕ್ತಿಯಾಗಿ ಬೆಳೆವುದಕ್ಕೆ ಗುರಿ ಸ್ಪಷ್ಟವಾಗಿರಬೇಕು. ಗುರುಗಳ ಮಾರ್ಗದರ್ಶನದಲ್ಲಿ ಶ್ರಮಿಸುತ್ತಾ ಮುಂದುವರಿದರೆ ಯಶಸ್ಸು ಖಚಿತ. ಗ್ರಾಮೀಣ ಮಕ್ಕಳಲ್ಲೂ ಅಪಾರ ಪ್ರತಿಭೆ ಇದೆ; ಅವರಿಗೆ ಅವಕಾಶ ಮಾತ್ರ ಕಡಿಮೆ,” ಎಂದು ಅಭಿಪ್ರಾಯಪಟ್ಟರು.
ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ ಮಾತನಾಡಿ, ಮಕ್ಕಳಲ್ಲಿ ಸಂವಿಧಾನದ ಅರಿವು ಬೆಳೆಸುವ ಅಗತ್ಯವನ್ನು ಹೀಗಿ ಹೇಳಿದರು. “ಸಂವಿಧಾನದ ಪ್ರಕಾರ ಎಲ್ಲರೂ ಸಮಾನರು; ಮಕ್ಕಳ ಮನಸ್ಸಿನಲ್ಲಿ ಜಾತಿ–ಧರ್ಮದ ಭೇದಬಾವನೆ ಬೆಳೆಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ,” ಎಂದು ಮನದಟ್ಟುಗಾರಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಪುಟ್ಟಮಕ್ಕಳು ಬಣ್ಣ ಬಣ್ಣದ ವೇಷಧಾರಣೆಗಳಲ್ಲಿ ವಿವಿಧ ಕಲಾ ಪ್ರದರ್ಶನ ನೀಡಿದ್ದು, ವೇದಿಕೆಗೆ ಸೊಬಗು ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಬಿ.ಇ.ಓ ಫೈರೋಜ್‌ಬೆಗಮ್, ಕ.ಸಾ.ಪ. ಅಧ್ಯಕ್ಷ ಈರಣ್ಣ, ರುದ್ರೇಶ್, ವಜೀರ್‌ಖಾನ್, ಬಿ.ಜಿ. ಹನುಮಂತರಾಯಪ್ಪ, ರಾಧಮ್ಮ, ಮಂಜುನಾಥ್, ತಿಪ್ಪೇಸ್ವಾಮಿ, ಲಕ್ಷ್ಮೀಪುತ್ರ, ಪರಮೇಶ್, ಈಶ್ವರ್, ಹನುಮಂತರಾಯಪ್ಪ ಸೇರಿದಂತೆ ಅನೇಕರು ಹಾಜರಾಗಿದ್ದರು
