ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು ಜಿಲ್ಲೆ
ವರದಿ ದಿನಾಂಕ :
30-09-2025
ತುಮಕೂರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುವ ರಸ್ತೆ ಯೋಜನೆಗೆ ತೀವ್ರ ವಿರೋಧ
ತುಮಕೂರು: ನಂದಿಹಳ್ಳಿ–ಮಲ್ಲಸಂದ್ರ–ವಸಂತನರಸಾಪುರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಫಲವತ್ತಾದ ರೈತರ ಜಮೀನುಗಳನ್ನು ಕಬಳಿಸಲು ಮುಂದಾದ ಸರ್ಕಾರದ ನಿರ್ಧಾರಕ್ಕೆ ರೈತರು ಹಾಗೂ ಸಂಘಟನೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಂದಿಹಳ್ಳಿ–ಮಲ್ಲಸಂದ್ರ–ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ರಚನೆಯಾಗಿದ್ದು, ಶನಿವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೋರಾಟದ ರೂಪುರೇಷೆ ಪ್ರಕಟಿಸಲಾಯಿತು.
ರೈತರ ಆರೋಪ: ಭೂಸ್ವಾಧೀನ ಕಾಯ್ದೆ–2013 ಉಲ್ಲಂಘನೆ. ರೈತರ ಒಪ್ಪಿಗೆ ಇಲ್ಲದೆ ಅಧಿಸೂಚನೆ ಹೊರಡಿಕೆ. 44 ಹಳ್ಳಿಗಳ 650 ಎಕರೆ ಜಮೀನು ವಶಪಡಿಸಿಕೊಳ್ಳುವ ಯತ್ನ. 750ಕ್ಕೂ ಹೆಚ್ಚು ಕುಟುಂಬಗಳು ಬೀದಿಗೇರಲಿರುವ ಅಪಾಯ. ಸಾಮಾಜಿಕ ಪರಿಣಾಮಗಳ ಕುರಿತು ಯಾವುದೇ ಸರ್ವೇ ಇಲ್ಲದೆ ಭೂಮಿ ಕಿತ್ತುಕೊಳ್ಳುವ ಪ್ರಯತ್ನ.
ಹೋರಾಟದ ಘೋಷಣೆ: ಅ.4ರಿಂದ 6ರವರೆಗೆ ಜಾಗೃತಿ ಜಾಥಾ. ಅ.13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಮಹಾಪ್ರತಿಭಟನೆ. ಸಂಯುಕ್ತ ಹೋರಾಟ–ಕರ್ನಾಟಕ ಸಂಚಾಲಕ ಸಿ.ಯತಿರಾಜು, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಎಐಕೆಎಂಎಸ್ ಮುಖಂಡ ಎಸ್.ಎನ್.ಸ್ವಾಮಿ, ಎಸ್.ಎಂ. ಸಂಯೋಜಕ ಬಿ.ಉಮೇಶ್, ಎಐಕೆಎಸ್ ಮುಖಂಡ ಕಂಬೇಗೌಡ, ಕೆಪಿಆರ್‌ಎಸ್ ಅಜ್ಜಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು. ಪರ್ಯಾಯ ಮಾರ್ಗದ ಸೂಚನೆ: ದಾಬಸ್ ಪೇಟೆಯಿಂದ ಗುಬ್ಬಿವರೆಗೆ ಈಗಿರುವ 120 ಅಡಿ ಅಗಲದ ನಕಾಸೆ ರಸ್ತೆಯನ್ನು ಔಟರ್ ರಿಂಗ್ ರಸ್ತೆಯಾಗಿ ಪರಿಗಣಿಸಲು ಒತ್ತಾಯಿಸಿದರೂ ಜಿಲ್ಲಾಧಿಕಾರಿ ಸ್ಪಂದಿಸಿಲ್ಲವೆಂದು ನಾಯಕರು ಆರೋಪಿಸಿದರು. 👉 ಮುಖಂಡರಾದ ರಮೇಶ್ ಭೈರಸಂದ್ರ, ಸಿದ್ದಗಂಗಮ್ಮ, ಚಿಕ್ಕಬೋರೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
