ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
25-11-2025
ಚಾಮರಾಜನಗರದಲ್ಲಿ ಕಾಡಾನೆ ದಾಳಿ – ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿದ ಘಟನೆ
ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಜೋಳದ ಫಸಲು ನಾಶವಾದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳನ್ನು ರೈತರು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ಗ್ರಾಮದ ರೈತ ಕದರಯ್ಯ ಅವರ ಅಲ್ಪ ಜಮೀನಿನಲ್ಲಿ ಬೆಳೆದಿದ್ದ ಜೋಳ ಇನ್ನೇನು ಕಟಾವಿಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿ ಸುಮಾರು ಅರ್ಧ ಎಕರೆಯಷ್ಟು ಬೆಳೆ ತಿಂದು ನಾಶಪಡಿಸಿದೆ. ಬೆಳೆ ಮಾತ್ರವಲ್ಲದೆ ಜಮೀನಿನ ಸುತ್ತಲೂ ಅಳವಡಿಸಿದ್ದ ಕಲ್ಲು–ಕಂಬ ಮೆಸ್‌ಗೂ ಕಾಡಾನೆ ಹಾನಿ ಮಾಡಿದ್ದು, ರೈತನಿಗೆ ಹೆಚ್ಚುವರಿ ನಷ್ಟ ಉಂಟಾಗಿದೆ.
“ನಮಗೆ ಬೆಳೆ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು” ಸ್ಥಳಕ್ಕೆ ಬಂದಿದ್ದ ಅರಣ್ಯ ಅಧಿಕಾರಿಗಳಿಗೆ ಕದರಯ್ಯ ಹಾಗೂ ಸ್ಥಳೀಯ ರೈತ ಪರ ಸಂಘಟನೆಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಪ್ರತಿ ವರ್ಷ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಬೆಳೆ ಹಾನಿಯಾಗದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕಾಡಾನೆ ದಾಳಿ ತಡೆಯಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವವರೆಗೆ ಸ್ಥಳ ಪರಿಶೀಲನೆ ಬೇಡ” ಎಂದು ರೈತರು ತಿಳಿಸಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಕ್ರಮ ಜರುಗದಿರುವುದರಿಂದ ಅಸಮಾಧಾನಗೊಂಡ ರೈತರು ಅಧಿಕಾರಿಗಳಿಗೆ ಪರಿಶೀಲನೆಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಪ್ಪ, ಎಂ.ಟಿ. ದೊಡ್ಡಿ ಶ್ರೀನಿವಾಸ್, ಮುರುಗೇಶ್, ಕದರಯ್ಯ, ಭದ್ರ, ರಮೇಶ್ ಹಾಗೂ ಹಲವರು ಹಾಜರಿದ್ದರು.
