ವರದಿಗಾರರು :
ನಾ. ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
26-11-2025
ಚಾಮರಾಜನಗರ – ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದಲ್ಲಿ ಕಳ್ಳತನ
ಕೊಳ್ಳೇಗಾಲ ತಾಲ್ಲೂಕಿನ ಜಿನಕನಹಳ್ಳಿ ಗ್ರಾಮದ ಶಿವಣ್ಣ ಎಂಬವರ ಮನೆಯಲ್ಲಿ ನೆನ್ನೆ ರಾತ್ರಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ₹8 ಲಕ್ಷ ನಗದು, 118 ಗ್ರಾಂ ಚಿನ್ನಾಭರಣ ಮತ್ತು 750 ಗ್ರಾಂ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಶಿವಣ್ಣ ಮತ್ತು ಅವರ ಪತ್ನಿ ರಾಜಮ್ಮ ಅವರು ನ.22 ರಂದು ಶಬರಿಮಲೆ ದೇವಾಲಯಕ್ಕೆ ತೆರಳಿದ್ದರಿಂದ ಮನೆ ಖಾಲಿಯಾಗಿತ್ತು. ಮಂಗಳವಾರ ಬೆಳಿಗ್ಗೆ ಮನೆ ಬಾಗಿಲು ತೆರೆದಿರುವುದನ್ನು ಅಕ್ಕಪಕ್ಕದವರು ಗಮನಿಸಿ 112 ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
