ವರದಿಗಾರರು :
ಬಸವರಾಜ್ ||
ಸ್ಥಳ :
ಹಾಸನ
ವರದಿ ದಿನಾಂಕ :
28-11-2025
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ನುಡಿ ಹಬ್ಬದ ಆಚರಣೆ
ಅರಸೀಕೆರೆ ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘ, ತಾಲ್ಲೂಕು ಘಟಕ, ಅವರ ಸಹಯೋಗದಲ್ಲಿ ಕನ್ನಡ ನುಡಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್. ನಾರಾಯಣ್ ಅವರು, “ಕನ್ನಡ ಶ್ರೇಷ್ಠ ಭಾಷೆ. ಈ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ನಮ್ಮ ಕಾಲೇಜಿನಲ್ಲಿ ಪ್ರತಿವರ್ಷ ಕನ್ನಡ ನಾಡು ನುಡಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡವೆಂದರೆ ಅದು ಭಾಷೆಯಷ್ಟೇ ಅಲ್ಲ, ಸಂಸ್ಕೃತಿ, ಜೀವನ ಶೈಲಿ,” ಎಂದು ಉಲ್ಲೇಖಿಸಿದರು.
ಬರಹಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಡಾ. ಬಸವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು “ಕನ್ನಡ ಉಳಿಸಲು ಹೋರಾಡಬೇಕಿಲ್ಲ; ಕನ್ನಡಿಗರಾಗಿರುವ ನಾವು ಪ್ರಭಾವಶಾಲಿಯಾಗಿ ಕನ್ನಡವನ್ನು ಬಳಸಬೇಕು. ಆಗ ಮಾತ್ರ ಕನ್ನಡ ಬೆಳೆಯಲು ಸಾಧ್ಯ. ಇಂಗ್ಲಿಷ್ ವ್ಯಾಮೋಹವು ಕನ್ನಡಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ; ಪರಿಶ್ರಮದಿಂದ ಪ್ರಯತ್ನಿಸಿ,” ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕುಮಾರ್ ಅವರು, “ನ್ಯಾಯಾಂಗ, ಬ್ಯಾಂಕಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಿದಾಗ, ಕನ್ನಡ ಭಾಷೆ ಮತ್ತಷ್ಟು ಬೆಳೆಯಬಹುದು,” ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲ್ಲೂಕು ಅಧ್ಯಕ್ಷ ಕಿರಣ್ ಕುಮಾರ್ “ಕನ್ನಡ ನೆಲ, ಜಲ, ಸಂಸ್ಕೃತಿ ಕುಸಿತಕ್ಕೀಡಾಗದಂತೆ ನೋಡಬೇಕು. ಕನ್ನಡ ಶಾಲೆಗಳು, ಕಾಲೇಜುಗಳಿಗೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು. ನಾವೆಲ್ಲರೂ ಕನ್ನಡ ಸಂಸ್ಕೃತಿ ಉಳಿಸುತ್ತಾ ಸ್ವಾಭಿಮಾನದಿಂದ ಬದುಕೋಣ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಭಾಷಣಕಾರರಾಗಿ ಕೆ.ಸಿ. ನಟರಾಜ್ ಅವರು ಕನ್ನಡ ನಾಡು ನುಡಿಯ ಪ್ರಾಚೀನತೆ ಕುರಿತು ವಿವರಿಸಿದರು. ಪಂಪ, ರನ್ನ, ಕುಮಾರವ್ಯಾಸ, ಶರಣರು, ದಾಸ ಸಾಹಿತ್ಯದ ವಿಶೇಷತೆಯನ್ನು ಆಸಕ್ತಿದಾಯಕವಾಗಿ ವಿವರಿಸಿದರು. ಕಾಲೇಜಿ ಅಭಿವೃದ್ಧಿ ಸಮಿತಿಯ ಸದಸ್ಯ ಚಂದ್ರೇಗೌಡರು ಕನ್ನಡ ಜಾನಪದ ಸಾಹಿತ್ಯದ ಮಹತ್ವವನ್ನು ಹಂಚಿಕೊಂಡು, ತಮ್ಮ ಶಿಷ್ಯ ಬಳಗ “ಚಿಕ್ಕೂರು ಕಲಾತಂಡ” ಜೊತೆ ಕೋಲಾಟ ಪ್ರದರ್ಶನ ನಡೆಸಿದರು. ಶಿಕ್ಷಕರು ಮತ್ತು ಹಾಡುಗಾರರಾದ ಪಾಜಿಲ್ ಅಹಮದ್ ಖಾನ್ ಕನ್ನಡ ನುಡಿ ಪ್ರತಿಬಿಂಬಿಸುವ ಹಾಡುಗಳನ್ನು ಹಾಡಿ ಕಾರ್ಯಕ್ರಮವನ್ನು ರಂಜಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಸಡಗರದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ. ಹರೀಶ್ ಕುಮಾರ್ ಎಲ್ಲರನ್ನು ಸ್ವಾಗತಿಸಿ, ಉಪನ್ಯಾಸಕ ರವಿ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ನಿರೂಪಕರು ಕಲಾವತಿ ಮತ್ತು ಚಂದ್ರ ಶೇಖರ ನಿರೂಪಿಸಿದರು. ಪ್ರೊ. ಶಿವಕುಮಾರ್, ಚಿತ್ರಕಲಾ ಉಪನ್ಯಾಸಕರಾದ ಹರೀಶ್ ರಾಘವೇಂದ್ರ, ಡಾ. ಸುನೀಲ್, ಡಾ. ರಾಜೇಶ್ ಖನ್ನಾ, ಮಲ್ಲಿಕಾರ್ಜುನ, ಪ್ರಕಾಶ್, ಪಿಂಟು, ರತ್ನಮ್ಮ, ಗಂಗಾ, ವೀಣಾ, ಪ್ರತಿಭಾ, ಮೋಹನ್ ಸೇರಿದಂತೆ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು.
