ವರದಿಗಾರರು :
ನಾ ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
13-11-2025
ಗುಂಡ್ಲುಪೇಟೆಯಲ್ಲಿ ರೈತರ ಬಾರ್ ಕೋಲ್ ಚಳುವಳಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕಳೆದ ಒಂದು ತಿಂಗಳಿಂದ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಬುಧವಾರ ಬಾರ್ ಕೋಲ್ ಚಳುವಳಿಗೆ ತೀವ್ರತೆ ನೀಡಿದರು. ರೈತರ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳುವಳಿಯಲ್ಲಿ, ರೈತರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಹತ್ತಾರು ವರ್ಷಗಳಿಂದ ಬಾಕಿ ಉಳಿದ ಕೃಷಿ ಭೂಮಿಗಳ ಸಾಗುವಳಿ ಚೀಟಿಗಳನ್ನು ವಿತರಿಸುವುದು, ಹಾಗೂ ಹುಲಿ ದಾಳಿಯಲ್ಲಿ ಮೃತಪಟ್ಟ ರೈತರಿಗೆ ₹1 ಕೋಟಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಒಂದು ತಿಂಗಳಿನಿಂದ ಶಾಂತಿಪೂರ್ಣವಾಗಿ ಧರಣಿ ನಡೆಸುತ್ತಿದ್ದ ರೈತರು, ಬುಧವಾರ ಬಾರ್ ಕೋಲ್ ಧ್ವನಿಯನ್ನು ಎತ್ತಿ ಪಟ್ಟಣದ ಮುಖ್ಯರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಅವರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಪರಿಗಣಿಸದಿದ್ದರೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಅವರು ನೀಡಿದರು.
