ವರದಿಗಾರರು :
ಶಿವಲಿಂಗ ಕುಂಬಾರ್ ||
ಸ್ಥಳ :
bagalkot
ವರದಿ ದಿನಾಂಕ :
09-12-2025
ನೆಲಕ್ಕುರುಳಿದ ಶತಮಾನದ ಮರಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಂಸ್ಥಾನದ ಪಟವರ್ಧನ್ ಮನೆತನ ನೂರು ವರ್ಷಗಳ ಹಿಂದೆಯೇ ರಾಮತೀರ್ಥ ರಸ್ತೆಯಲ್ಲಿ ಮರಗಳನ್ನು ನೆಟ್ಟಿದ್ದರು. ಆದರೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಮರಗಳು ಇಂದು ಧರೆಗೆ ಉರುಳುತ್ತಿವೆ.
ಸಂಸ್ಥಾನಿಕರ ಕಾಲದಲ್ಲಿ ರಾಮತೀರ್ಥ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಾಜ ಮಹಾರಾಜರಿಗೆ ನೆರಳು, ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುತ್ತಾ ಬಂದಿದ್ದ ಶತಮಾನಗಳ ಕಾಲದ ಅರಳಿ, ಹುಣಸೆ, ಬೇವಿನ ಹಾಗೂ ಆಲದ ಮರಗಳು ಬುಡ ಸಮೇತ ಕಿತ್ತು ಹಾಕುತ್ತಿರುವುದು ಪರಿಸರ ಪ್ರೇಮಿಗಳಿಗೂ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯುದ್ಧಕ್ಕೂ ನೆರಳಿನ ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿದ ಬೃಹತ್ ಮರಗಳು ಅತ್ಯಧಿಕ ಪ್ರಮಾಣದ ಇಂಗಾಲವನ್ನು ಹೀರಿಕೊಳ್ಳುತ್ತ ಮಾನವ ಉಪಕಾರಿಯಾಗಿದ್ದ ಮತ್ತು ತಂಪು ಒದಗಿಸುತ್ತಿದ್ದ ಮರಗಳನ್ನು ಕಡಿದು ಹಾಕಿದ್ದರಿಂದ ನೂರಾರು ಪಕ್ಷಿಗಳು ತಮ್ಮ ಗೂಡುಗಳನ್ನು ಕಳೆದುಕೊಂಡು ಮೂಕರೋಧನೆ ಅನುಭವಿಸುತ್ತಿವೆ.
ಐತಿಹಾಸಿಕ ಮರಗಳನ್ನು ಸಂರಕ್ಷಿಸುವುದು ಅಥವಾ ವೈಜ್ಞಾನಿಕವಾಗಿ ಸ್ಥಳಾಂತರಿಸುವುದಕ್ಕೆ ಆದ್ಯತೆಯಾಗಬೇಕು. ಅಭಿವೃದ್ಧಿ ಯೋಜನೆಗಳು ಅನಿವಾರ್ಯವಾದರೂ ಅಭಿವೃದ್ಧಿಯ ನೆಪ ಹೇಳಿ ಜೀವಂತ ಇತಿಹಾಸವನ್ನು ಬಲಿಕೊಡುವುದು ಎಷ್ಟು ಸರಿ? ಮೂಲಸೌಕರ್ಯ ಅಭಿವೃದ್ಧಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ, ಮುಂದಿನ ಭವಿಷ್ಯದ ದೃಷ್ಟಿಯಿಂದ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಮಾರಕ ಎಂದು ನಾಗರಿಕರ ಕಳಕಳಿಯಾಗಿದೆ.
