ವರದಿಗಾರರು :
ಕಿಶೋರ್ ಎ ಸಿ ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
10-12-2025
ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷ್ಣರಾಜ ಪೇಟೆ ತಾಲ್ಲೂಕಿನ ಸಿಂಧಘಟ್ಟ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕನ್ನಡ ಭಾಷೆಯ ಪಠ್ಯವನ್ನು ಸರಿಯಾಗಿ ಬೋದನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಿಇಓ ರವರಿಗೆ ತಿಳಿಸಿದರು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರು ನಾಳೆಯೇ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಿಳಿಸಿರುವ ವಿಷಯದ ಬಗ್ಗೆ ಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಸೂಚಿಸಿದರು.
ಮಧ್ಯಾಹ್ನ ಬಿಸಿ ಊಟ ಯೋಜನೆಯಡಿ ಶಾಲೆಗೆ ಸರಬರಾಜು ಮಾಡಿರುವ ಅಡುಗೆ ಎಣ್ಣೆಯ ಅವಧಿ ಮುಕ್ತಾಯವಾಗಿರುವುದನ್ನು ಗಮನಿಸಲಾಗಿದ್ದು, ಈ ಬಗ್ಗೆ ಮಧ್ಯಾಹ್ನ ಬಿಸಿ ಊಟ ಯೋಜನೆಯ ಶಿಕ್ಷಣಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ. ಸಿಇಓ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಪರಿಶೀಲನೆ: ಸಿಂದಘಟ್ಟ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಹಾಸ್ಟೆಲ್ ನಲ್ಲಿ ನಿಗದಿತ ಮೆನು ಪ್ರಕಾರ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸುತ್ತಿರುವ ಬಗ್ಗೆ ಹಾಗೂ ಶೌಚಾಲಯ, ಮಲಗುವ ಕೋಣೆ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ವಸತಿನಿಲಯಗಳಲ್ಲಿನ ಕುಂದು ಕೊರತೆ ಆಲಿಸಲು ನೀಡಲಾಗಿರುವ ಸಹಾಯವಾಣಿ ಸಂಖ್ಯೆಯನ್ನು ಹಾಸ್ಟೆಲ್ ನ ಊಟದ ಹಾಲ್, ನೋಟೀಸ್ ಬೋರ್ಡ್ ಸೇರಿದಂತೆ ಇತರೆ ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ವೈ.ಕೆ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರುದ್ರೇಶ್, ಬಿಸಿ ಊಟ ಯೋಜನೆಯ ಸಹಾಯಕ ನಿರ್ದೇಶಕ ಯತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಣಿ ಸೇರಿದಂತೆ ಇತರರು ಹಾಜರಿದ್ದರು.
